ಬೆಳಗಾವಿ: ಸರ್ಕಾರದಿಂದ ನೀಡಲಾಗುವ ಸಿಎ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಈಗಿನ ಮೂರು ವರ್ಷಗಳ ಅವಧಿಯನ್ನು ಐದು ವರ್ಷಗಳಿಗೆ ವಿಸ್ತರಿಸುವ ಕುರಿತು ಸರ್ಕಾರ ಗಂಭೀರವಾಗಿ ಪರಿಶೀಲನೆ ನಡೆಸಲಿದೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.
ವಿಧಾನಪರಿಷತ್ತಿನಲ್ಲಿ ಮಾತನಾಡಿದ ಅವರು, ಸಿಎ ನಿವೇಶನ ಪಡೆದು ಮೂರು ವರ್ಷಗಳ ಒಳಗೆ ಉದ್ದೇಶಿತ ನಿರ್ಮಾಣ ಪ್ರಾರಂಭಿಸಬೇಕೆಂಬ ನಿಯಮವನ್ನು ಸಡಿಲಿಸಬೇಕೆಂಬ ಒತ್ತಾಯ ಹಲವು ಕಡೆಗಳಿಂದ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಅವಧಿ ವಿಸ್ತರಣೆ ಬಗ್ಗೆ ಕ್ರಮ ಕೈಗೊಳ್ಳಲು ಸರ್ಕಾರ ತೀರ್ಮಾನಿಸಿದೆ ಎಂದು ಹೇಳಿದರು.
ಯಾವುದೇ ಸಂದರ್ಭದಲ್ಲೂ ಸಿಎ ನಿವೇಶನಕ್ಕೆ ಶುದ್ಧ ಕ್ರಯಪತ್ರ ನೀಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು. ಜೊತೆಗೆ ಎಸ್ಸಿ-ಎಸ್ಟಿ ಸಮುದಾಯಗಳಿಗೆ ನೀಡಲಾಗುತ್ತಿರುವ ಮೀಸಲಾತಿ ಕಡಿತಗೊಳ್ಳುವುದಿಲ್ಲ ಎಂಬುದನ್ನೂ ತಿಳಿಸಿದರು. ನಗರಾಭಿವೃದ್ಧಿ ಪ್ರಾಧಿಕಾರಗಳಿಂದ ನೀಡಿರುವ ಸಿಎ ನಿವೇಶನಗಳ ಗುತ್ತಿಗೆ ಅವಧಿ 30 ವರ್ಷಗಳಾದ ಬಳಿಕ ನವೀಕರಿಸುವ ಸಂದರ್ಭದಲ್ಲಿ, ಹಿಂದಿನ ದರಗಳನ್ನು ನಿಗದಿಪಡಿಸಲು ಸಾಧ್ಯವಿಲ್ಲ. ಆದರೆ, ಎಸ್ಆರ್ ದರವನ್ನು ಕಡಿಮೆ ಮಾಡುವ ಬಗ್ಗೆ ಸರ್ಕಾರ ಪರಿಗಣಿಸುವುದಾಗಿ ಸಚಿವರು ತಿಳಿಸಿದರು.



