ನವದೆಹಲಿ: ಸೌರ ವಿದ್ಯುತ್ ಮೂಲಕ ರೈತರ ಸಬಲೀಕರಣಕ್ಕಾಗಿ ಕೃಷಿ ಪಿವಿ (Agrivoltaic) ಯೋಜನೆಗಳನ್ನು ಉತ್ತೇಜಿಸಲು ಕೇಂದ್ರ ಸರ್ಕಾರ PM-KUSUM 2.0 ಯೋಜನೆಯನ್ನು ಸಿದ್ಧಪಡಿಸುತ್ತಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ದೆಹಲಿನಲ್ಲಿ ನಡೆದ 4ನೇ ರಾಷ್ಟ್ರೀಯ ಕೃಷಿ-ಪರಿಸರ ತಂತ್ರಜ್ಞಾನ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಯೋಜನೆಯಡಿ 10 ಗಿಗಾವಾಟ್ (GW) ಕೃಷಿ ಪಿವಿ ಘಟಕಗಳನ್ನು ಸ್ಥಾಪಿಸುವ ಉದ್ದೇಶವಿದೆ ಎಂದು ಹೇಳಿದರು.
ಈ ಯೋಜನೆಯ ಮೂಲಕ ರೈತರು ಒಂದೇ ಭೂಮಿಯಲ್ಲಿ ಬೆಳೆ ಬೆಳೆಸುವ ಜೊತೆಗೆ ವಿದ್ಯುತ್ ಉತ್ಪಾದಿಸಲು ಅವಕಾಶ ಸಿಗಲಿದೆ. “PM-KUSUM 2.0” ಗ್ರಾಮೀಣ ಭಾರತದಲ್ಲಿ ವಿಕೇಂದ್ರೀಕೃತ ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಹೊಸ ಮಾದರಿ ಸೃಷ್ಟಿಸಲಿದೆ. ಇದರಿಂದ ಗ್ರಾಮೀಣ ಆರ್ಥಿಕತೆ ಉತ್ತೇಜನ ಪಡೆಯುವ ಜೊತೆಗೆ ರೈತರ ಆದಾಯ ಹೆಚ್ಚಲು ಸಹಾಯವಾಗಲಿದೆ ಎಂದು ಅವರು ತಿಳಿಸಿದರು.
PM-KUSUM ಯೋಜನೆಯಡಿ ಈಗಾಗಲೇ ದೇಶಾದ್ಯಂತ 10 ಲಕ್ಷಕ್ಕೂ ಹೆಚ್ಚು ಸೌರ ಕೃಷಿ ಪಂಪ್‌ಗಳನ್ನು ಸ್ಥಾಪಿಸಲಾಗಿದೆ. ಜೊತೆಗೆ 13 ಲಕ್ಷಕ್ಕೂ ಹೆಚ್ಚು ಗ್ರಿಡ್ ಸಂಪರ್ಕಿತ ಕೃಷಿ ಪಂಪ್‌ಗಳನ್ನು ಸೌರೀಕರಣಗೊಳಿಸಲಾಗಿದೆ.
ಈ ಮೂಲಕ ರೈತರು ಇಂದು ಕೇವಲ “ಅನ್ನದಾತ” ಮಾತ್ರವಲ್ಲದೆ “ಉರ್ಜದಾತ” (ಇಂಧನ ಪೂರೈಕೆದಾರರು) ಆಗುವ ಅವಕಾಶವನ್ನು ಪಡೆಯುತ್ತಿದ್ದಾರೆ ಎಂದು ಜೋಶಿ ಹೇಳಿದರು.
ನವೀಕರಿಸಬಹುದಾದ ಇಂಧನ ಬಳಕೆ ಕೃಷಿ ಭೂಮಿ ಮತ್ತು ಮನೆಗಳಿಗೆ ಹೆಚ್ಚಾಗಿ ತಲುಪುತ್ತಿದ್ದು, ನೀರಾವರಿ ವೆಚ್ಚವನ್ನು ಕಡಿಮೆ ಮಾಡುವ ಜೊತೆಗೆ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಜೊತೆಗೆ ರೈತರಿಗೆ ವಿಶ್ವಾಸಾರ್ಹ ವಿದ್ಯುತ್ ಪೂರೈಕೆ ದೊರಕಲು ಸಹಾಯ ಮಾಡುತ್ತಿದೆ ಎಂದು ಹೇಳಿದರು.
ಕೃಷಿಯಲ್ಲಿ ಸೌರಶಕ್ತಿ ಬಳಕೆ ಡೀಸೆಲ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದರ ಜೊತೆಗೆ ಕೃಷಿ ವೆಚ್ಚವನ್ನು ಕೂಡ ಇಳಿಸುತ್ತದೆ. ಡೀಸೆಲ್ ಬಳಸಿ ನೀರಾವರಿ ಮಾಡಿದರೆ ಗೋಧಿಗೆ ಎಕರೆಗೆ ಸುಮಾರು ₹6,790 ಹಾಗೂ ಹತ್ತಿಯಂತಹ ಬೆಳೆಗಳಿಗೆ ₹8,000ಕ್ಕಿಂತ ಹೆಚ್ಚು ವೆಚ್ಚವಾಗಬಹುದು. ಆದರೆ ಸೌರ ಪಂಪ್ ಬಳಕೆ ಮಾಡಿದರೆ ಎಕರೆಗೆ ₹5,000ರಿಂದ ₹6,500ರವರೆಗೆ ಉಳಿತಾಯ ಸಾಧ್ಯವಾಗುತ್ತದೆ. ಜೊತೆಗೆ ಕಾರ್ಬನ್ ಹೊರಸೂಸುವಿಕೆ ಕಡಿಮೆಯಾಗುತ್ತದೆ ಎಂದು ಹೇಳಿದರು.



