ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ದೆಹಲಿಯ ರಾಯ್ ಪಿಥೋರಾ ಸಾಂಸ್ಕೃತಿಕ ಸಂಕೀರ್ಣದಲ್ಲಿ ‘ದಿ ಲೈಟ್ & ದಿ ಲೋಟಸ್: ರೆಲಿಕ್ಸ್ ಆಫ್ ದಿ ಅವೇಕನ್ಡ್ ಒನ್’ ಎಂಬ ಪಿಪ್ರಹ್ವಾ ರೆಲಿಕ್ಸ್ ಅಂತರರಾಷ್ಟ್ರೀಯ ಪ್ರದರ್ಶನವನ್ನು ಉದ್ಘಾಟಿಸಿದರು. 127 ವರ್ಷಗಳ ಬಳಿಕ ಭಾರತಕ್ಕೆ ಮರಳಿದ ಭಗವಾನ್ ಬುದ್ಧನ ಪಿಪ್ರಹ್ವಾ ರತ್ನದ ಅವಶೇಷಗಳ ಮಹತ್ವವನ್ನು ದೇಶಕ್ಕೆ ಪರಿಚಯಿಸುವ ಉದ್ದೇಶದಿಂದ ಈ ಪ್ರದರ್ಶನವನ್ನು ಆಯೋಜಿಸಲಾಗಿದೆ.
ಈ ಪ್ರದರ್ಶನದಲ್ಲಿ 1898ರಲ್ಲಿ ನಡೆದ ಉತ್ಖನನ ಹಾಗೂ 1971–1975ರ ಅವಧಿಯಲ್ಲಿ ಪಿಪ್ರಹ್ವಾ ಸ್ಥಳದಲ್ಲಿ ನಡೆದ ಉತ್ಖನನದ ವೇಳೆ ಪತ್ತೆಯಾದ ಬುದ್ಧನ ರತ್ನದ ಅವಶೇಷಗಳು ಮತ್ತು ಇತರೆ ಪುರಾತನ ವಸ್ತುಗಳನ್ನು ಪ್ರದರ್ಶಿಸಲಾಗಿದೆ. ಈ ಕುರಿತು ಪ್ರಧಾನಿ ಮೋದಿ ಅವರು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಈ ಪ್ರದರ್ಶನವು ಭಾರತದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಒಂದು ಶತಮಾನಕ್ಕೂ ಹೆಚ್ಚು ಕಾಲದ ಬಳಿಕ ಪಿಪ್ರಹ್ವಾ ಅವಶೇಷಗಳನ್ನು ಮರಳಿ ತರುವಲ್ಲಿ ಯಶಸ್ಸು ಸಾಧಿಸಲಾಗಿದೆ. ಈ ಅಮೂಲ್ಯ ಅವಶೇಷಗಳನ್ನು ನವದೆಹಲಿಯ ರಾಷ್ಟ್ರೀಯ ವಸ್ತುಸಂಗ್ರಹಾಲಯ ಮತ್ತು ಕೋಲ್ಕತ್ತಾದ ಭಾರತೀಯ ವಸ್ತುಸಂಗ್ರಹಾಲಯದಲ್ಲಿ ಸುರಕ್ಷಿತವಾಗಿ ಸಂರಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಪ್ರದರ್ಶನವು ಭಗವಾನ್ ಬುದ್ಧನ ಉದಾತ್ತ ಚಿಂತನೆಗಳು ಮತ್ತು ಸಂದೇಶಗಳನ್ನು ಇನ್ನಷ್ಟು ಜನಪ್ರಿಯಗೊಳಿಸುವ ಪ್ರಯತ್ನವಾಗಿದೆ. ನಮ್ಮ ಯುವಜನರು ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ನಡುವೆ ಗಟ್ಟಿಯಾದ ಬಾಂಧವ್ಯವನ್ನು ನಿರ್ಮಿಸುವ ದಿಕ್ಕಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಈ ಅವಶೇಷಗಳ ವಾಪಸಾತಿಗೆ ಶ್ರಮಿಸಿದ ಎಲ್ಲರನ್ನು ಕೃತಜ್ಞತೆಯಿಂದ ಶ್ಲಾಘಿಸುವುದಾಗಿ ಹೇಳಿದರು.



