ದೆಹಲಿ: ಯುಗಾದಿ ಮತ್ತು ಹೊಸ ವರ್ಷದ ಶುಭ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದ್ದಾರೆ.
ದೇಶದ ಜನರಿಗೆ ಪತ್ರ ಬರೆದಿರುವ ಅವರು, ವಸಂತ ಋತುವಿನ ಆಗಮನವು ಹೊಸ ಚೈತನ್ಯ ಮತ್ತು ಅವಕಾಶಗಳನ್ನು ತರಲಿ. ಪವಿತ್ರ ಯುಗಾದಿಯ ಸಂದರ್ಭದಲ್ಲಿ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಸುಖಮಯ ಹೊಸ ವರ್ಷದ ಶುಭಾಶಯಗಳು” ಎಂದು ಉಲ್ಲೇಖಿಸಿದ್ದಾರೆ.
ಯುಗಾದಿಯು ಹೊಸ ಕೃಷಿ ಚಟುವಟಿಕೆಗಳ ಆರಂಭದ ಕಾಲವಾಗಿರುವುದನ್ನು ಶ್ಲಾಘಿಸಿ, ನಮ್ಮ ದೇಶದ ರೈತರು ಹೊಸ ಆಶಾವಾದದೊಂದಿಗೆ ಮುಂದಿನ ಕೃಷಿ ಚಕ್ರಕ್ಕೆ ಸಜ್ಜಾಗುತ್ತಿರುವುದನ್ನು ಮೋದಿ ಮೆಚ್ಚಿಸಿದ್ದಾರೆ. ಜೀವನದ ಸಿಹಿ-ಕಹಿಗಳನ್ನು ಸಮಾನವಾಗಿ ಸ್ವೀಕರಿಸಬೇಕು ಎಂಬ ಯುಗಾದಿಯ ಸಾಂಪ್ರದಾಯಿಕ ಸಂದೇಶವನ್ನು ಅವರು ನೆನಪಿಸಿದ್ದಾರೆ. ಸವಾಲುಗಳನ್ನು ಧೈರ್ಯದಿಂದ ಎದುರಿಸಿ ಯಶಸ್ಸನ್ನು ಕೃತಜ್ಞತೆಯಿಂದ ಸ್ವೀಕರಿಸಲು ಯುಗಾದಿ ಪ್ರೇರಣೆ ನೀಡುತ್ತದೆ ಎಂದಿದ್ದಾರೆ.
ಇದಲ್ಲದೆ, ಪ್ರಧಾನಿಯವರು ಕರ್ನಾಟಕದ ಜನತೆಗೆ ವಿಶೇಷ ಸಂದೇಶ ನೀಡಿದ್ದಾರೆ. ಸಾಮಾಜಿಕ ಜಾಲತಾಣ X ಮಾಡಿರುವ ಅವರು, “ಕರ್ನಾಟಕದ ನನ್ನ ಎಲ್ಲಾ ಸಹೋದರ-ಸಹೋದರಿಯರಿಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.” ಯುಗಾದಿಯು ಹೊಸ ಭರವಸೆ ಮತ್ತು ಚೈತನ್ಯದ ಹಬ್ಬವಾಗಿದ್ದು, ಇದು ಪ್ರತಿಯೊಬ್ಬರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರಲಿ ಎಂದು ಅವರು ಹಾರೈಸಿದ್ದಾರೆ.
ಮುಂಬರುವ ವರ್ಷವು ಎಲ್ಲರ ಮನೆಮನಗಳಲ್ಲಿ ಸುಖ, ಶಾಂತಿ, ಆರೋಗ್ಯ ಮತ್ತು ಐಶ್ವರ್ಯ ತುಂಬಲಿ ಎಂದು ಪ್ರಧಾನಿ ಮೋದಿ ಪ್ರಾರ್ಥಿಸಿದ್ದಾರೆ.



