ಉಡುಪಿ: ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ನವೆಂಬರ್ 28ರಂದು ನಡೆಯಲಿರುವ ‘ಲಕ್ಷಕಂಠ ಗೀತಾ ಪಾರಾಯಣ’ ಮಹಾಪಾರಾಯಣ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ, ಆ ದಿನವನ್ನು ಸಾರ್ವತ್ರಿಕ ಸ್ಥಳೀಯ ರಜೆ ಎಂದು ಘೋಷಿಸಲು ಉಡುಪಿ ಶಾಸಕ ಯಶಪಾಲ್ ಸುವರ್ಣ ಅವರು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.
ಪ್ರಧಾನಿ ಮೋದಿ ಸುಮಾರು ಮೂರು ದಶಕಗಳ ನಂತರ, ಚುನಾವಣಾ ಪ್ರಚಾರ ಹೊರತುಪಡಿಸಿ, ಉಡುಪಿಗೆ ಭೇಟಿ ನೀಡುತ್ತಿರುವುದು ಜಿಲ್ಲೆಯ ಜನತೆಗೆ ಹೆಮ್ಮೆಯ ವಿಷಯವಾಗಿದೆ. ಪರ್ಯಾಯ ಪುತ್ತಿಗೆ ಮಠದ ಆಶ್ರಯದಲ್ಲಿ ನಡೆಯಲಿರುವ ಈ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಮತ್ತು ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆಯಿದೆ.
ಪ್ರಧಾನಮಂತ್ರಿಗಳ ಭೇಟಿ ಸಮಯದ ಶಿಷ್ಟಾಚಾರಕ್ಕೆ ಸಂಬಂಧಿಸಿದಂತೆ ವಾಹನಗಳ ಸಂಚಾರ ಮತ್ತು ಸಾರ್ವಜನಿಕ ಓಡಾಟದ ನಿರ್ಬಂಧವಿರುವುದರಿಂದ 28ರ ಶುಕ್ರವಾರದಂದು ತುರ್ತು ಮತ್ತು ಅಗತ್ಯ ಸೇವೆಗಳನ್ನು ಹೊರತುಪಡಿಸಿ, ಅಂಗನವಾಡಿ, ಶಾಲಾ-ಕಾಲೇಜು ಹಾಗೂ ಸರಕಾರಿ ಕಛೇರಿಗಳು ಸೇರಿದಂತೆ ಜಿಲ್ಲಾದ್ಯಂತ ಒಂದು ದಿನದ ಸಾರ್ವತ್ರಿಕ ಸ್ಥಳೀಯ ರಜೆ ಘೋಷಿಸುವಂತೆ ಕೋರಿದ್ದಾರೆ.


