ಕೇರಳ: ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಪ್ರಧಾನಿ ನರೇಂದ್ರ ಮೋದಿ ಇಂದು ಕೇರಳಕ್ಕೆ ಭೇಟಿ ನೀಡುತ್ತಿದ್ದಾರೆ. ಆದರೆ ಈ ಅಧಿಕೃತ ಕಾರ್ಯಕ್ರಮದಿಂದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಕೆಲವು ಸಚಿವರು ದೂರವಿರಲು ನಿರ್ಧರಿಸಿದ್ದಾರೆ.
ಕೇರಳದ ಲೋಕೋಪಯೋಗಿ ಸಚಿವ ಪಿ.ಎ. ಮೊಹಮ್ಮದ್ ರಿಯಾಸ್ ಅವರನ್ನು ಕಾರ್ಯಕ್ರಮದಿಂದ ಹೊರಗಿಟ್ಟ ಆರೋಪದ ಹಿನ್ನೆಲೆಯಲ್ಲಿ ಸಿಎಂ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೇರಳದಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಷಟ್ಪಥ ವಿಸ್ತರಣೆಯ ಮೊದಲ ಹಂತ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳನ್ನು ಪ್ರಧಾನಿ ಮೋದಿ ಮಧ್ಯಾಹ್ನ 12.30ಕ್ಕೆ ಉದ್ಘಾಟಿಸಲಿದ್ದಾರೆ. ತಲಪ್ಪಾಡಿ–ಚೆಂಗಲ ಮಾರ್ಗ ಹಾಗೂ ಕೋಯಿಕ್ಕೋಡ್ ಬೈಪಾಸ್‌ನ ವೆಂಗಲಂ–ರಾಮನಟ್ಟುಕರ ಮಾರ್ಗಗಳನ್ನು ಆರು ಪಥಗಳಿಗೆ ಉನ್ನತೀಕರಿಸಲಾಗಿದ್ದು, ಅದರ ಉದ್ಘಾಟನೆ ನಡೆಯಲಿದೆ.
ಈ ಅಧಿಕೃತ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭಾಗವಹಿಸುವುದಿಲ್ಲ. ಕಾರ್ಯಕ್ರಮದ ಅಧಿಕೃತ ಪಟ್ಟಿಯಲ್ಲಿ ಸಿಎಂ ಹೆಸರಿದ್ದರೂ ಅವರು ಭಾಗವಹಿಸದಿರಲು ನಿರ್ಧರಿಸಿದ್ದಾರೆ. ಆದರೆ ಈ ಕುರಿತು ಯಾವುದೇ ನಿರ್ದಿಷ್ಟ ಕಾರಣವನ್ನು ಪ್ರಕಟಿಸಲಾಗಿಲ್ಲ.
ಪ್ರಧಾನಿ ಕಾರ್ಯಕ್ರಮಕ್ಕೆ ರಾಜ್ಯ ಸಚಿವರಾದ ಎಂ.ಬಿ. ರಾಜೇಶ್ ಮತ್ತು ಕೆ. ಕೃಷ್ಣಕುಟ್ಟಿ ಅವರಿಗೆ ಆಹ್ವಾನ ನೀಡಲಾಗಿದ್ದರೂ, ಅವರು ವೈಯಕ್ತಿಕ ಕಾರಣಗಳಿಂದ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ತಿಳಿದುಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಲೋಕೋಪಯೋಗಿ ಸಚಿವ ಪಿ.ಎ. ಮೊಹಮ್ಮದ್ ರಿಯಾಸ್, ಈ ಕಾರ್ಯಕ್ರಮಕ್ಕೆ ತಮಗೆ ಆಹ್ವಾನ ನೀಡಲಾಗಿಲ್ಲ ಎಂದು ಹೇಳಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯಲ್ಲಿ ಭೂ ಸ್ವಾಧೀನ ಮತ್ತು ನಿಧಿ ಹಂಚಿಕೆ ಸೇರಿದಂತೆ ಹಲವು ವಿಚಾರಗಳಲ್ಲಿ ರಾಜ್ಯ ಸರ್ಕಾರ ಪ್ರಮುಖ ಪಾತ್ರ ವಹಿಸಿದೆ ಎಂದು ತಿಳಿಸಿದ್ದಾರೆ.
ಹೆದ್ದಾರಿ ಯೋಜನೆಗಳ ಉದ್ಘಾಟನೆ ಕಾರ್ಯಕ್ರಮಕ್ಕೆ ಲೋಕೋಪಯೋಗಿ ಸಚಿವರನ್ನು ಆಹ್ವಾನಿಸದ ಕಾರಣದಿಂದ ಈ ವಿವಾದ ಭುಗಿಲೆದ್ದಿದ್ದು, ಅದರ ಹಿನ್ನೆಲೆ ಸಿಎಂ ಹಾಗೂ ಕೆಲ ಸಚಿವರು ಕಾರ್ಯಕ್ರಮದಿಂದ ದೂರವಿರುವ ನಿರ್ಧಾರ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.



