ಕಾರವಾರ:- ಕಾರವಾರದ ಸರ್ಕಾರಿ ಬಾಲಮಂದಿರದಲ್ಲಿ ಪೋಕ್ಸೋ ಸಂತ್ರಸ್ತ ಬಾಲಕಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣದಿಂದ ಬಾಲ ಮಂದಿರದ ರಕ್ಷಣಾ ವ್ಯವಸ್ಥೆಯ ಲೋಪ ಎತ್ತಿ ತೋರಿಸಿದೆ.
ಮೂಲತಃ ಹಳಿಯಾಳ ತಾಲೂಕಿನವಳಾದ ಈ ಬಾಲಕಿ, ಕಳೆದ ಆಗಸ್ಟ್‌ನಲ್ಲಿ ಪೋಕ್ಸೋ ಪ್ರಕರಣವೊಂದರ ಅಡಿಯಲ್ಲಿ ರಕ್ಷಿಸಿ ಕಾರವಾರದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸರ್ಕಾರಿ ಬಾಲಮಂದಿರಕ್ಕೆ ದಾಖಲಿಸಲಾಗಿತ್ತು.
ಈಕೆ ಕಾರವಾರದ ಸರ್ಕಾರಿ ಪ್ರೌಢಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದಳು. ಆದರೆ, ಮಾನಸಿಕ ಒತ್ತಡದ ಕಾರಣ ಕಳೆದ ಎರಡು ವಾರಗಳಿಂದ ಶಾಲೆಗೆ ಹೋಗದೆ ಬಾಲಮಂದಿರದಲ್ಲಿಯೇ ಉಳಿದುಕೊಂಡಿದ್ದಳು. ಶನಿವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ, ಯಾರೂ ಇಲ್ಲದ ಸಮಯ ನೋಡಿ ಮೇಲಿನ ಕೋಣೆಗೆ ತೆರಳಿ ನೇಣು ಹಾಕಿಕೊಳ್ಳಲು ಯತ್ನಿಸಿದ್ದಾಳೆ. ತಕ್ಷಣ ಗಮನಿಸಿದ ಸಿಬ್ಬಂದಿ ಆಕೆಯನ್ನು ರಕ್ಷಿಸಿ ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೀಗ ಆಕೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಬಾಲಮಂದಿರದಲ್ಲಿ 20 ಬಾಲಕಿಯರಿಗೆ 10 ಮಂದಿ ಸಿಬ್ಬಂದಿ ಇದ್ದಾರೆ. ಇಷ್ಟು ದೊಡ್ಡ ಸಂಖ್ಯೆಯ ಸಿಬ್ಬಂದಿ ಇದ್ದರೂ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪದೇ ಪದೇ ಬೆದರಿಕೆ ಹಾಕುತ್ತಿದ್ದ ಬಾಲಕಿ ಒಬ್ಬಂಟಿಯಾಗಿ ಬಿಟ್ಟಿರುವುದೇ ತಪ್ಪು. ವಿವಿಧ ಪ್ರಕರಣಗಳಲ್ಲಿ ಸಂತ್ರಸ್ತರಾಗಿ ಬರುವ ಮಕ್ಕಳಿಗೆ ಕೇವಲ ಆಶ್ರಯ ನೀಡಿದರೆ ಸಾಲದು, ಅವರಿಗೆ ಮಾನಸಿಕ ಧೈರ್ಯ ತುಂಬುವ ತಜ್ಞರ ಅವಶ್ಯಕತೆ ಇಂತಹ ಕೇಂದ್ರಗಳಲ್ಲಿ ಹೆಚ್ಚಾಗಿರುತ್ತದೆ.
ಇದೀಗ ಬಾಲಕಿಯ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಆದರೆ, ಈ ಘಟನೆಯ ನಂತರ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಬಾಲಮಂದಿರದ ಭದ್ರತೆ ಮತ್ತು ಮಕ್ಕಳ ಮಾನಸಿಕ ಸ್ವಾಸ್ಥ್ಯದ ಬಗ್ಗೆ ಹೆಚ್ಚಿನ ಕ್ರಮ ಕೈಗೊಳ್ಳಬೇಕಿದೆ.



