ಬೆಂಗಳೂರು:- ನಗರದ ಬೆಳ್ಳಂದೂರು ಕೆರೆಯಲ್ಲಿ ಮತ್ತೆ ನೊರೆ ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಹೆಚ್ಚಿಸಿದೆ.
ಬೆಂಗಳೂರಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯ ಬಳಿಕ, ಬೆಳ್ಳಂದೂರು ಕೆರೆಯಲ್ಲಿ ಭಾರಿ ಪ್ರಮಾಣದಲ್ಲಿ ನೊರೆ ಕಾಣಿಸಿಕೊಳ್ಳುತ್ತಿದೆ. ಕೆರೆಗೆ ನೀರಿನ ಹರಿವು ಹೆಚ್ಚಾಗಿದ್ದರಿಂದ ನೊರೆ ಪ್ರಮಾಣವು ಏರಿಕೆಯಾಗಿದೆ. ಬೆಳ್ಳಂದೂರು ಕೆರೆ ಕಲುಷಿತವಾಗಿದೆಂದು ಸ್ಥಳೀಯರು ಆತಂಕಗೊಂಡಿದ್ದು, ಕಲುಷಿತ ನೀರು ಕೆರೆಗೆ ಸೇರ್ಪಡೆಯಾದ ಕಾರಣ, ಮಲಿನವಾಗಿ ಕೆರೆ ಕೋಡಿಯಲ್ಲಿ ನೊರೆ ಎದ್ದು, ಗಾಳಿ ಮೂಲಕ ಜನವಸತಿ ಪ್ರದೇಶದ ಕಡೆಗೆ ಹೋಗುತ್ತಿದೆ.
ಬೆಳ್ಳಂದೂರು, ಕರಿಯಮ್ಮ ಅಗ್ರಹಾರ, ಯಮಲೂರು, ಕೆಂಪಾಪುರ, ಚಲಘಟ್ಟ, ನಾಗಸಂದ್ರ ಇಬ್ಬಲೂರು, ದೇವರ ಬೀಸನಹಳ್ಳಿ ಕಾಡುಬೀಸನಹಳ್ಳಿ ಪ್ರದೇಶದ ಜನರಿಗೆ ಮತ್ತೆ ತೊಂದರೆ ಉಂಟಾಗಿದ್ದು, ಪದೇ ಪದೇ ಬೆಳ್ಳಂದೂರು ಕೆರೆಯಲ್ಲಿ ದೊಡ್ಡ ಪ್ರಮಾಣದಲ್ಲಿ ನೊರೆ ಕಾಣಿಸಿಕೊಳ್ಳುತ್ತಿದೆ. ಇದರಿಂದ ಜನತೆ ಆತಂಕಕ್ಕೆ ಒಳಗಾಗಿದ್ದಾರೆ.