ಗಗನಯಾತ್ರಿ ಸುನೀತಾ ವಿಲಿಯಮ್ಸ್ ಬಾಹ್ಯಾಕಾಶ ತಲುಪಿ ಕೆಲ ತಿಂಗಳೆ ಕಳೆದಿದೆ. ಈಗಾಗಲೇ ಅವರು ಭೂಮಿಗೆ ವಾಪಸ್ ಆಗಬೇಕಿತ್ತು. ಆದ್ರೆ ಕೆಲವೊಂದು ತಾಂತ್ರಿಕಾ ಕಾರಣದಿಂದಾಗಿ ಸುನೀತಾ ವಿಲಿಯಮ್ಸ್ ಹಾಗೂ ಅವರ ತಂಡ ಬಾಹ್ಯಾಕಾಶದಲ್ಲೇ ಸಿಲುಕಿಕೊಂಡಿದೆ. ಅವರು ಭೂಮಿಗೆ ಮರಳಲೂ ಇನ್ನೂ ಕೆಲ ತಿಂಗಳೇ ಬೇಕು. ಈ ಮಧ್ಯೆ ಸುನೀತಾ ವಿಲಿಯಮ್ಸ್ ಇರುವ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ವಿಚಿತ್ರವಾದ ವಿಷಕಾರಿ ವಾಸನೆ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ತುರ್ತು ಕ್ರಮಕ್ಕೆ ಚಾಲನೆ ನೀಡಲಾಗಿದೆ. ಸರಕು ಬಾಹ್ಯಾಕಾಶ ನೌಕೆಯ ಬಾಗಿಲನ್ನು ತೆರೆಯುವಾಗ ವಿಷಕಾರಿ ವಾಸನೆ ಪತ್ತೆಯಾಗಿದ್ದು ಸಿಬ್ಬಂದಿ ತಕ್ಷಣ ಪ್ರತಿಕ್ರಿಯಿಸಿದ್ದಾರೆ ಎಂದು ವರದಿಯಾಗಿದೆ.
ಬಾಹ್ಯಾಕಾಶ ನಿಲ್ದಾಣಕ್ಕೆ ಆಹಾರ, ಇಂಧನದಂತಹ ಅಗತ್ಯದ ವಸ್ತುಗಳನ್ನು ತರುವ ಎಂಎಸ್-29 ಸರಕು ನೌಕೆಯ ದ್ವಾರವನ್ನು ತೆರೆದಾಗ ಅಲ್ಲಿ ಅಸಹಜ ವಾಸನೆ ಪತ್ತೆಯಾಗಿದೆ. ಅಲ್ಲದೆ ಸರಕು ನೌಕೆಯ ಒಳಗಡೆ ಸಣ್ಣ ಹನಿಗಳೂ ಕಂಡು ಬಂದಿದೆ.ಇದು ಸಾಕಷ್ಟು ಸಾಕಷ್ಟು ಚಿಂತೆಗೆ ಕಾರಣವಾಗಿತ್ತು.
ಸಂಭಾವ್ಯ ಅಪಾಯವನ್ನು ಪತ್ತೆಹಚ್ಚಿದ ಸಿಬ್ಬಂದಿ ತಕ್ಷಣವೇ ದ್ವಾರವನ್ನು ಸೀಲ್ ಮಾಡಿದರು ಮತ್ತು ಆ ಪ್ರದೇಶವನ್ನು ಬಾಹ್ಯಾಕಾಶ ನಿಲ್ದಾಣದ ಇತರ ಪ್ರದೇಶಗಳಿಂದ ಪ್ರತ್ಯೇಕಿಸಿದರು. ತಕ್ಷಣ ಕಾರ್ಯ ನಿರ್ವಹಿಸಿದ ನಾಸಾ(ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಕೇಂದ್ರ) ಗಾಳಿಯನ್ನು ಶುದ್ಧೀಕರಿಸಲು ನಿಲ್ದಾಣದಾದ್ಯಂತ ಏರ್ ಸ್ಕ್ರಬ್ಬಿಂಗ್ ವ್ಯವಸ್ಥೆಗೆ ಚಾಲನೆ ನೀಡಿದೆ.
ಸುರಕ್ಷತೆಯನ್ನು ಖಾತರಿಪಡಿಸಲು ಸಿಬ್ಬಂದಿಗಳು ವೈಯಕ್ತಿಕ ಸುರಕ್ಷತಾ ಸಾಧನ(ಪಿಪಿಇ)ಯನ್ನು ಧರಿಸಿದರು. ಕ್ಷಿಪ್ರ ಪ್ರತಿಕ್ರಿಯೆಯು ಸಿಬ್ಬಂದಿಗಳಿಗೆ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮತ್ತು ತಮ್ಮ ಕಾರ್ಯವನ್ನು ಮುಂದುವರಿಸಲು ನೆರವಾಗಿದೆ . ಇದೀಗ ಐಎಸ್ಎಸ್ನಲ್ಲಿನ ವಾಯು ಗುಣಮಟ್ಟ ಸಹಜ ಸ್ಥಿತಿಗೆ ಮರಳಿದ್ದು ಸಿಬ್ಬಂದಿಗಳ ಸುರಕ್ಷತೆಗೆ ಅಪಾಯವಿಲ್ಲ. ಆದರೆ ವಾಸನೆಯ ಕಾರಣ ಸ್ಪಷ್ಟವಾಗಿಲ್ಲ ಮತ್ತು ತನಿಖೆ ಮುಂದುವರಿದಿದೆ ಎಂದು ಎಂದು ನಾಸಾದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.