ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಪವಿತ್ರಾ ಗೌಡ ಸೇರಿದಂತೆ ಏಳು ಮಂದಿಯ ಬೇಲ್ ಕ್ಯಾನ್ಸಲ್ ಆಗಿದೆ. ಇಂದು ಮಧ್ಯಾಹ್ನ ಪವಿತ್ರಾ ಗೌಡ ಅವರನ್ನು ಬಂಧಿಸುವ ಸಾಧ್ಯತೆ ಇದ್ದು ಈ ಮಧ್ಯೆ ದರ್ಶನ್ ನಿನ್ನೆ ರಾತ್ರಿಯೇ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ಇಂದೇ ದರ್ಶನ್ ಅವರನ್ನು ಅರೆಸ್ಟ್ ಮಾಡ್ತಾರಾ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಹೀಗಾಗಿ ಪರಪ್ಪನ ಅಗ್ರಹಾರದ ಬಳಿ ಪೊಲೀಸರು ಬಿಗಿ ಭದ್ರತೆ, ಅಗತ್ಯ ಮತ್ತು ಸುರಕ್ಷಿತ ಕ್ರಮ ಕೈಗೊಳ್ಳಲಾಗುತ್ತಿದೆ.
ದರ್ಶನ್ ಅವರನ್ನು ಮತ್ತೆ ಬಂಧಿಸಲಿರುವ ಹಿನ್ನೆಲೆಯಲ್ಲಿ ಅಭಿಮಾನಿಗಳು ಪರಪ್ಪನ ಅಗ್ರಹಾರದ ಬಳಿ ಬಂದು ಗಲಾಟೆ ಮಾಡಬಹುದು ಎಂಬ ಕಾರಣಕ್ಕೆ ಪೊಲೀಸರು ಮುನ್ನೆಚರಿಕೆ ಕ್ರಮ ಕೈಗೊಂಡಿದ್ದಾರೆ. ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಜೈಲಿನ ಆವರಣದ ಸುತ್ತಾಮುತ್ತ ಬ್ಯಾರಿಕೇಡ್ ಅಳವಡಿಸುತ್ತಿದ್ದಾರೆ. ಅಲ್ಲದೇ ಸ್ಥಳದಲ್ಲಿ ಕೆಎಸ್ ಐ ಎಸ್ ಎಫ್ ಮತ್ತು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಲ್ಲದೇ ಜೈಲಿಗೆ ಭೇಟಿ ನೀಡುವವರನ್ನು ಸಂಪೂರ್ಣವಾಗಿ ಪರಿಶೀಲಿಸಿ ಆ ಬಳಿಕವೇ ಒಳಗೆ ಹೋಗಲು ಅವಕಾಶ ನೀಡಲಾಗುತ್ತಿದೆ.
ಈ ನಡುವೆ ಕೊಲೆ ಆರೋಪಿ ದರ್ಶನ್ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ದರ್ಶನ್ ಇರುವ ಸ್ಥಳವನ್ನು ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದಾರೆ. ಕೊನೆಯದಾಗಿ ನಿನ್ನೆ ರಾತ್ರಿ ಮೈಸೂರಿನ ಫಾರ್ಮ್ ಹೌಸ್ ಲೊಕೇಷನ್ ತೋರಿಸಿದೆ. ಇದಾದ ಬಳಿಕ ಲಕ್ಷ್ಮಣ್ ಹಾಗೂ ದರ್ಶನ್ ಮೊಬೈಲ್ ಆಪ್ ಆಗಿದೆ. ಹೀಗಾಗಿ ಮೊಬೈಲ್ ನಂಬರ್ ಸಿಡಿಆರ್ ಮೂಲಕ ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದಾರೆ.