ಬಳ್ಳಾರಿ:- ಬೀಟ್ ಪೊಲೀಸರ ಸಮಯ ಪ್ರಜ್ಞೆಯಿಂದ ಮಧ್ಯರಾತ್ರಿ ಎಟಿಎಂ ದರೋಡೆಗೆ ಯತ್ನಿಸಿದ ಖದೀಮ ಸಿಕ್ಕಿ ಬಿದ್ದಿದ್ದಾನೆ. ಅನಂತಪುರದ ವೆಂಕಟೇಶ ಬಂಧಿತ ಆರೋಪಿ. ಪೊಲೀಸ್ ಕಾರ್ಯಾಚರಣೆಯ ರೋಚಕ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆರೋಪಿ ವೆಂಕಟೇಶ ಆಕ್ಸಿಸ್ ಬ್ಯಾಂಕ್ ಎಟಿಎಂಗೆ ನುಗ್ಗಿ ಕಳವು ಮಾಡಲು ಯತ್ನಿಸಿದ್ದಾನೆ.
ಎಟಿಎಂ ಬಾಕ್ಸ್ ಹೊತ್ತೊಯ್ಯಲು ಯತ್ನಿಸಿದ್ದಾನೆ. ಈ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ದೊರೆತಿದೆ. ಎಎಸ್ಐ ಮಲ್ಲಿಕಾರ್ಜುನ ಕಾರ್ಯಾಚರಣೆಗೆ ಧಾವಿಸಿದ್ದು, ಬೀಟ್ನ ಇತರ ಪೊಲೀಸರಿಗೂ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸುತ್ತಿದ್ದಂತೆಯೇ ಖದೀಮ ಎಟಿಎಂ ಒಳಗೆ ಇರುವುದು ಕಾಣಿಸಿದೆ. ತಕ್ಷಣವೇ ಎಟಿಎಂ ಒಳ ಧಾವಿಸಿದ ಎಎಸ್ಐ ಮಲ್ಲಿಕಾರ್ಜುನ ಖದೀಮನ ಬಂಧಿಸಲು ಯತ್ನಿಸಿದ್ದಾರೆ. ಆತ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಇಬ್ಬರ ಮಧ್ಯೆ ತೀವ್ರ ಜಟಾಪಟಿಯಾಗಿದೆ. ಈ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಮೈ ಜುಂ ಎನಿಸುವಂತಿದೆ.
ಸ್ವಲ್ಪ ಯಾಮಾರಿದರೂ ಆರೋಪಿಯು ಪೊಲೀಸ್ ಮೇಲೆ ಭಯಾನಕ ದಾಳಿ ಮಾಡುತ್ತಿದ್ದ. ಆದರೆ, ಅಷ್ಟರಲ್ಲಿ ರಾತ್ರಿ ಬೀಟ್ನ ಮತ್ತೊಬ್ಬ ಕಾನ್ಸ್ಟೇಬಲ್ ನಿಂಗಪ್ಪ ಎಎಸ್ಐ ಸಹಾಯಕ್ಕೆ ಧಾವಿಸಿದ್ದಾರೆ. ನಂತರ ಆರೋಪಿ ವೆಂಕಟೇಶನಿಗೆ ಸರೀ ತದುಕಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಬಳ್ಳಾರಿಯ ರಾತ್ರಿ ಬೀಟ್ ಪೊಲೀಸರ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸದ್ಯ ಎಸ್ಪಿ ಶೋಭಾರಾಣಿ ಪೊಲೀಸರ ಕಾರ್ಯಕ್ಕೆ ಮೆಚ್ಚಿ ಸನ್ಮಾನಿಸಿ, ಅಭಿನಂದಿಸಿದ್ದಾರೆ.