ಬೆಂಗಳೂರು: ರಾಜನಕುಂಟೆ ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಡ್ರಗ್ಸ್ ಸಾಗಾಟದಲ್ಲಿ ತೊಡಗಿದ್ದ ಮೂವರು ವಿದೇಶಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಸುಮಾರು 2.8 ಕಿಲೋಗ್ರಾಂ ಎಂ.ಡಿ.ಎಂ.ಎ ಡ್ರಗ್, ಎರಡು ಲಕ್ಷ ನಗದು, 7 ಮೊಬೈಲ್ ಫೋನ್‌ಗಳು ಮತ್ತು ವೇಯಿಂಗ್ ಮಷೀನ್‌ನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಳ್ಳಲಾದ ಮಾದಕ ವಸ್ತುಗಳ ಮೌಲ್ಯ ನಾಲ್ಕು ಕೋಟಿ ರೂಪಾಯಿಗೂ ಅಧಿಕವಾಗಿದೆ.
ಆರೋಪಿತರು ರೆಡಿಮೇಡ್ ಬಟ್ಟೆಗಳ ಪ್ಯಾಕ್‌ಗಳಲ್ಲಿ ಮತ್ತು ಶರ್ಟ್ ಪ್ಯಾಂಟ್‌ಗಳಿಗೆ ಬಳಸುವ ಕಾರ್ಡ್‌ಬೋರ್ಡ್‌ಗಳಲ್ಲಿ ಡ್ರಗ್ಸ್ ತುಂಬಿ ಮಾರಾಟ ಮಾಡುತ್ತಿದ್ದರು. ಬೇರೆಯವರ ಹೆಸರಿನಲ್ಲಿ ಮನೆ ಬಾಡಿಗೆಗೆ ಪಡೆದು, ಆ ಮನೆಯಲ್ಲಿಯೇ ಪ್ಯಾಕಿಂಗ್ ಮತ್ತು ಸರಬರಾಜು ಕೆಲಸಗಳನ್ನು ನಡೆಸುತ್ತಿದ್ದರೆನ್ನಲಾಗಿದೆ.
ಅನುಮಾನ ಬರದಂತೆ ಆರೋಪಿತರು ಮನೆ ಹೊರಗೆ ಏರ್‌ಪೋರ್ಟ್ ಸೆಕ್ಯುರಿಟಿ ತರಹದ ಬಂದೋಬಸ್ತ್ ಕೂಡ ಮಾಡಿಕೊಂಡಿದ್ದರು. ಸದ್ಯ ರಾಜನಕುಂಟೆ ಪೊಲೀಸರು ಆರೋಪಿಗಳನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಮಾದಕ ವಸ್ತು ಜಾಲದಲ್ಲಿ ಭಾಗಿಯಾಗಿರುವ ಇತರರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.