ಬೆಂಗಳೂರು: ಟ್ರಾಫಿಕ್ ಪೊಲೀಸರು ಹೆಚ್ಚಾಗಿ ವಾಹನ ಮಾಲೀಕರಿಂದ ಲೂಟಿ ಮಾಡುತ್ತಾರೆ ಎನ್ನುವ ಆರೋಪ ಮೊದಲಿನಿಂದಲೂ ಇದೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದ್ದೇವೆ ಎಂದು ಎಷ್ಟೇ ಸಮರ್ಥಿಸಿಕೊಂಡರೂ ಆಗಾಗ ಲಂಚಬಾಕತನದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ಇವೆ. ಟ್ರಾಫಿಕ್ ಪೊಲೀಸರಿಗೆ ಹೆದರಿ ಕೆಲವರು ರಸ್ತೆಗೆ ಗಾಡಿ ತೆಗೆಯಲು ಕೂಡ ಹಿಂಜರಿಯುವ ಪರಿಸ್ಥಿತಿ ಇದೆ.
ಟ್ರಾಫಿಕ್ ಫೈನ್ ಕಟ್ಟಲು ಆಧುನಿಕ ತಂತ್ರಜ್ಞಾನಗಳು ಬಳಕೆಯಲ್ಲಿದ್ದರೂ, ಪೊಲೀಸರು ಲಂಚ ಪಡೆಯಲು ಅದೇ ತಂತ್ರಜ್ಞಾನದ ಮೊರೆ ಹೋಗುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಹೌದು ಸಂಚಾರ ನಿಯಮಗಳ ಉಲ್ಲಂಘನೆಗೆ ದಂಡ ವಿಧಿಸುವ ನೆಪದಲ್ಲಿ ಬೆಂಗಳೂರಿನ ವೈಟ್ ಫೀಲ್ಡ್ ಸಂಚಾರ ಪೊಲೀಸರು ಫೋನ್ ಪೇ, ಗೂಗಲ್ ಪೇ ಮೂಲಕ ತಮ್ಮ ವೈಯಕ್ತಿಕ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ.
ಫೆಬ್ರವರಿ 21 ರಂದು ವಾಹನ ಸವಾರರೊಬ್ಬರು ವರ್ತೂರು ಕರೆ ಬಳಿ ಓನ್ ವೇಯಲ್ಲಿ ಬಂದಿದ್ದರು. ರಾಚಮಲ್ಲ ಎಂಬುವವರು ಓನ್ ವೇಯಲ್ಲಿ ಬಂದು ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಮಾಡಿದ್ದರು. ಆ ಸಂದರ್ಭದಲ್ಲಿ ಅಲ್ಲಿ ಕರ್ತವ್ಯದಲ್ಲಿದ್ದ ಕಾನ್ಸ್‌ಟೇಬಲ್ ಮಂಜುನಾಥ್ ವಾಹನವನ್ನು ಅಡ್ಡ ಹಾಕಿ ನಿಲ್ಲಿಸಿದರು. ವಾಹನ ಸವಾರ 1500 ರೂಪಾಯಿ ದಂಡ ಪಾವತಿಸಲು ಸಿದ್ಧರಾಗಿದ್ದರು. ಆದರೆ, ವಾಹನ ಸವಾರನಿಗೆ ದಂಡದ ರಸೀದಿ ನೀಡಲು ಮಂಜುನಾಥ್ ಸಿದ್ಧರಿರಲಿಲ್ಲ. ಕೊನೆಗೆ 500 ರೂಪಾಯಿ ಫೋನ್ ಪೇ ಮಾಡಿಸಿಕೊಂಡು ಬಿಟ್ಟು ಕಳುಹಿಸಿದ್ದಾರೆ.
ವೈಟ್ ಫೀಲ್ಡ್ ಸಂಚಾರ ಪೊಲೀಸರ ಲಂಚಾವಾತರದ ಬಗ್ಗೆ ವಾಹನ ಸವಾರ ರಾಚಮಲ್ಲ ಎಸಿಪಿಗೆ ಇ-ಮೇಲ್ ಮೂಲಕ ದೂರು ನೀಡಿದ್ದಾರೆ. ಕಾನ್ಸ್‌ಟೇಬಲ್ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಚಮಲ್ಲ ದೂರಿನಲ್ಲಿ ಆಗ್ರಹಿಸಿದ್ದಾರೆ. ಇ ಮೇಲ್ ಮೂಲಕ ಎಸಿಪಿ ರಮೇಶ್ ದೂರು ಸ್ವೀಕಾರ ಮಾಡಿದ್ದು, ತನಿಖೆ ನಡೆಸಿ ವರದಿ ನೀಡುವಂತೆ ವೈಟ್ ಫೀಲ್ಡ್ ಸಂಚಾರಿ ಠಾಣೆ ಇನ್ಸ್‌ಪೆಕ್ಟರ್ ಗೆ ಸೂಚನೆ ನೀಡಿದ್ದಾರೆ.