ಪೊಲೀಸ್ ಇಲಾಖೆ ಸಮಾಜ-ಕಾನೂನುಗಳ ಸೇತುವೆ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಪ್ರತಿಯೊಂದು ಕುಟುಂಬವೂ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟಿದ್ದು, ಶಿಕ್ಷಣದಿಂದಲೇ ಸಮಾಜದಲ್ಲಿ ಅಸ್ಪೃಶ್ಯತೆ ಮತ್ತು ಮೂಢನಂಬಿಕೆಗಳು ಮೊದಲಿಗಿಂತಲೂ ಈಗ ಕಡಿಮೆಯಾಗಿದೆ ಎಂದು ಗದಗ ಜಿಲ್ಲಾ ಉಪ ಪೊಲೀಸ್ ಅಧೀಕ್ಷಕ (ಡಿ.ವೈ.ಎಸ್.ಪಿ) ಇನಾಮದಾರ ಹೇಳಿದರು.

Advertisement

ಇಲ್ಲಿಯ ಗ್ರಾ.ಪಂ ಆವರಣದಲ್ಲಿಯ ದಾನ ಚಿಂತಾಮಣಿ ಅತ್ತಿಮಬ್ಬೆ ರಂಗಮಂದಿರದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ, ಸಮಾಜ ಕಲ್ಯಾಣ ಇಲಾಖೆ, ವಿವಿಧ ದಲಿತ ಸಂಘಟನೆಗಳು, ಪೃಥ್ವಿಪ್ರಿಯಾ ಸಾರ್ವತ್ರಿಕ ಸೇವಾ ಸಂಸ್ಥೆ ಎಸ್.ಸಿ ಗದಗ, ಗ್ರಾ.ಪಂ ಲಕ್ಕುಂಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಅಸ್ಪೃಶ್ಯತಾ ನಿವಾರಣೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಸ್ಪೃಶ್ಯತೆಯನ್ನು ಬೇರು ಸಮೇತ ಕಿತ್ತು ಹಾಕಲು ಸರಕಾರ ಬೇರೆ ಬೇರೆ ಕಾನೂನುಗಳನ್ನು ರಚಿಸಿ ನಿರ್ಮೂಲನೆಗೆ ಯತ್ನಿಸುತ್ತಿದೆ. ಈ ದಿಸೆಯಲ್ಲಿ ಸಮಾಜ ಮತ್ತು ಕಾನೂನುಗಳ ಸೇತುವೆಯಾಗಿ ಪೊಲೀಸ್ ಇಲಾಖೆ ಕಾರ್ಯನಿರ್ವಹಿಸುತ್ತಿದೆ ಎಂದರು.

ಸಿ.ಡಬ್ಲೂ.ಸಿ ಸದಸ್ಯ, ವಕೀಲ ಬಸವರಾಜ ಸಂಶಿ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ ಅವರ ಸಂವಿಧಾನದ ಆಶಯಗಳಿಗೆ ಪೂರಕವಾಗಿ ನಡೆದುಕೊಂಡು ಸರ್ವರಲ್ಲಿ ಸಮಾನತೆ ತರಲು ಬುದ್ಧ, ಬಸವ, ಅಂಬೇಡ್ಕರ ತತ್ವಗಳನ್ನು ಅಳವಡಿಸಿಕೊಳ್ಳಬೇಕು. 1989ರಲ್ಲಿ ಜಾರಿಯಾದ ಎಸ್.ಸಿ-ಎಸ್.ಟಿ ದೌರ್ಜನ್ಯ ಕಾಯ್ದೆಯನ್ನು ಎಲ್ಲ ಸಮಾಜದ ಮುಖಂಡರು ಅರಿಯಬೇಕು ಎಂದರು.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಎಮ್. ಪಾಟೀಲ ಮಾತನಾಡಿ, ಅಸ್ಪೃಶ್ಯತೆ ಕಾನೂನು ಬಹುತೇಕ ಎಲ್ಲರಿಗೂ ಮನವರಿಕೆಯಾಗಿದೆ. ಆದರೂ ಸಹ ಪುನರ್ ಮನನ ಮಾಡಲು ಈ ಅರಿವು ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ ಅಧ್ಯಕ್ಷ ಕೆ.ಎಸ್. ಪೂಜಾರ ಮಾತನಾಡಿ, ಲಕ್ಕುಂಡಿ ಗ್ರಾಮದಲ್ಲಿ ದಲಿತ ಸಮುದಾಯ ಮುಖಂಡರನ್ನು ಗ್ರಾಮದಲ್ಲಿ ನಡೆಯುವ ಜಾತ್ರೆ, ಉತ್ಸವಗಳಲ್ಲಿ ಭಾಗವಹಿಸಲು ಆಹ್ವಾನಿಸುವುದು ಸೇರಿದಂತೆ ಎಲ್ಲ ದೇಗುಲಗಳಲ್ಲಿ ಮುಕ್ತ ಪ್ರವೇಶವಿದ್ದು, ಸಮಾನತೆಯಿಂದ ಇದ್ದೇವೆ ಎಂದರು.

ತಾ.ಪಂ ಸಹಾಯಕ ನಿರ್ದೇಶಕಿ ಅಶ್ವಿನಿ ಕುರಡಗಿ, ಎನ್.ಮಂಜುಳಾ ಮಾತನಾಡಿದರು.

ನೀಲಗುಂದ ಗ್ರಾಮದ ನಾಗರಾಜ ಜಕ್ಕಮ್ಮನವರ ನೇತೃತ್ವದ ಜಾನಪದ ಕಲಾ ತಂಡವು ಅಂಬೇಡ್ಕರ ಅವರ ಕುರಿತು ಹಾಡಿದ ಕ್ರಾಂತಿ ಗೀತೆಗಳು ಗಮನ ಸೆಳೆದವು. ಜಿಲ್ಲಾ ಉಪವಿಭಾಗದ ಮಟ್ಟದ ಎಸ್.ಸಿ-ಎಸ್.ಟಿ. ದೌರ್ಜನ್ಯ ನಿಯಂತ್ರಣ ಮತ್ತು ಜಾಗೃತಿ ಸಮಿತಿಯ ಸದಸ್ಯ ಬಸವರಾಜ ಮುಳ್ಳಾಳ, ತಾ.ಪಂ ಮಾಜಿ ಸದಸ್ಯ ಮಹೇಶ ಮುಸ್ಕಿನಭಾವಿ, ಗ್ರಾ.ಪಂ ಸದಸ್ಯರಾದ ಪೀರಸಾಬ ನದಾಫ್, ವೀರಣ್ಣ ಚಕ್ರಸಾಲಿ, ಮಹಾಂತೇಶ ಕಮತರ, ಕುಬೇರಪ್ಪ ಬೆಂತೂರು, ಲಕ್ಷ್ಮಣ ಗುಡಸಲಮನಿ, ಹನುಮಂತಪ್ಪ ಬಂಗಾರಿ, ಫಕ್ಕೀರಮ್ಮ ಬೇಲೇರಿ, ರಮೇಶ ಭಾವಿ, ಬಹುಜನ ಚಳುವಳಿಯ ಅಧ್ಯಕ್ಷೆ ನಾಗಮ್ಮ ಹಾಲಿನವರ, ಅಂಗನವಾಡಿ ಮೇಲ್ವಿಚಾರಕಿ ಸಾಹೀದಬೇಗಂ ಹತ್ತಿವಾಲೆ, ಎಂ.ಎಂ. ಹುಬ್ಬಳ್ಳಿ, ಮರಿಯಪ್ಪ ವಡ್ಡರ, ಉಪಸ್ಥಿತರಿದ್ದರು.

ಪಿ.ಡಿ.ಒ ಅಮೀರನಾಯಕ ಸ್ವಾಗತಿಸಿದರು. ಪೃಥ್ವಿಪ್ರಿಯಾ ಸಂಸ್ಥೆಯ ಕಾರ್ಯದರ್ಶಿ ರಮೇಶ ಕೊಳೂರು ನಿರೂಪಿಸಿ, ವಂದಿಸಿದರು.

ಜಿಲ್ಲಾ ಎಸ್.ಸಿ-ಎಸ್.ಟಿ ದೌರ್ಜನ್ಯ ನಿಯಂತ್ರಣ ಮತ್ತು ಜಾಗೃತಿ ಸಮಿತಿಯ ಸದಸ್ಯ ಶರೀಫ ಬಿಳೆಯಲಿ ಮಾತನಾಡಿ, ಸ್ವಾತಂತ್ರ್ಯ ಸಿಕ್ಕು 75 ವರ್ಷಗಳು ಕಳೆದರೂ ಅಸ್ಪೃಶತೆಯ ಕುರಿತು ಇನ್ನೂ ಅರಿವು ಕಾರ್ಯಕ್ರಮಗಳು ನಡೆಯುತ್ತಿರುವುದು ವಿಷಾದನೀಯ. ಬಹಿರಂಗವಾಗಿ ಅಸ್ಪೃಶತೆ ಇಲ್ಲವಾದರೂ ಮೇಲ್ವರ್ಗದ ಜನರಲ್ಲಿ ಆಂತರಿಕವಾಗಿ ಇನ್ನೂ ಅಸ್ಪೃಶತೆ ಇದೆ. ಅಂತರ್ಜಾತಿ ವಿವಾಹಗಳು ಹೆಚ್ಚೆಚ್ಚು ನಡೆದಾಗ ಮಾತ್ರ ಸಮಾನತೆ ಬರಲು ಸಾಧ್ಯವಾಗುತ್ತದೆ ಎಂದರು.


Spread the love

LEAVE A REPLY

Please enter your comment!
Please enter your name here