ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಮತ್ತೊಮ್ಮೆ ಜೀವ ಬೆದರಿಕೆ ಬಂದಿತ್ತು. ಕಾರನ್ನು ಸ್ಫೋಟಿಸುವುದಾಗಿ ಹಾಗೂ ಮನೆಗೆ ಬಂದು ಅವರನ್ನು ಕೊಲ್ಲುವುದಾಗಿ ದುಷ್ಕರ್ಮಿಗಳು ಬೆದರಿಕೆ ಹಾಕಿರುವ ಸಂಬಂಧ ಆರೋಪಿಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. 26 ವರ್ಷದ ಯುವಕನಾಗಿರುವ ಆರೋಪಿ ಮಾನಸಿಕವಾಗಿ ಅಸ್ವಸ್ಥನಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಮುಂಬೈ ಸಂಚಾರ ಪೊಲೀಸರ ವಾಟ್ಸಪ್ ಸಹಾಯವಾಣಿಗೆ ಸಲ್ಮಾನ್ ಖಾನ್ ಅವರಿಗೆ ಬೆದರಿಕೆ ಹಾಕಲಾದ ಸಂದೇಶ ಬಂದಿತ್ತು. ಸಲ್ಮಾನ್ ಅವರ ಕಾರನ್ನು ಬಾಂಬ್ ಇಟ್ಟು ಸ್ಫೋಟಿಸಲಾಗುವುದು ಮತ್ತು ಅವರ ಮನೆಗೆ ಪ್ರವೇಶಿಸಿದ ನಂತರ ಅವರ ಮೇಲೆ ದಾಳಿ ಮಾಡಲಾಗುವುದು ಎಂದು ಸಂದೇಶದಲ್ಲಿ ಹೇಳಲಾಗಿತ್ತು.
ಸಲ್ಮಾನ್ ಖಾನ್‌ಗೆ ಈಗಾಗಲೇ ವೈ-ಪ್ಲಸ್ ಭದ್ರತೆ ನೀಡಲಾಗಿದೆ. ಆದರೆ ಈ ಬೆದರಿಕೆಯ ನಂತರ, ಮುಂಬೈನ ವರ್ಲಿ ಪೊಲೀಸರು ತಕ್ಷಣ ಕ್ರಮ ಕೈಗೊಂಡರು. ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 351(2)(3)ರ ಅಡಿಯಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ಕ್ರಿಮಿನಲ್ ಬೆದರಿಕೆ ಪ್ರಕರಣವನ್ನು ದಾಖಲಿಸಿದ್ದಾರೆ. ಅಲ್ಲದೆ, ಬಾಂದ್ರಾದಲ್ಲಿರುವ ಸಲ್ಮಾನ್ ಮನೆಯ ಹೊರಗೆ ಪೊಲೀಸರು ಭದ್ರತೆಯನ್ನು ಹೆಚ್ಚಿಸಿದ್ದಾರೆ.
ಪ್ರಕರಣದ ತನಿಖೆ ಆರಂಭಿಸಿದಾಗ ವಡೋದರಾದ (Vadodara) ವಾಘೋಡಿಯಾ ತಾಲೂಕಿನಲ್ಲಿ ವಾಸಿಸುತ್ತಿರುವ ವ್ಯಕ್ತಿಯೊಬ್ಬರು ಈ ಬೆದರಿಕೆ ಕರೆಯನ್ನು ಕಳುಹಿಸಿದ್ದಾರೆ ಎಂದು ತಿಳಿದು ಬಂದಿತ್ತು. ಮುಂಬೈ ಪೊಲೀಸರ ತಂಡವು ವಾಘೋಡಿಯಾ ಪೊಲೀಸರೊಂದಿಗೆ ಆ ವ್ಯಕ್ತಿಯ ಮನೆಗೆ ತಲುಪಿದೆ ಎಂದು ವಡೋದರಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಆನಂದ್ ಹೇಳಿದ್ದಾರೆ.