ಬೆಂಗಳೂರು: ವಿವೇಕನಗರ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ರಸ್ತೆ ಬದಿಯಲ್ಲಿ ನಿಂತು ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಸಂಜಿತ್ ಬಾಗ್ (35) ಮತ್ತು ಮಿಥುನ್ ಕುಂಭಾರ್ (25) ಎಂದು ಗುರುತಿಸಲಾಗಿದೆ. ಆರೋಪಿಗಳು ಓಡಿಸ್ಸಾದಿಂದ ತರಲಾಗುತ್ತಿದ್ದ ಗಾಂಜಾವನ್ನು ನಗರದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ವಾಟ್ಸ್ಆಪ್ ಮೂಲಕ ಡ್ರಗ್ ಡೀಲಿಂಗ್ ನಡೆಸುತ್ತಿದ್ದು, ರಾಜಸ್ಥಾನದ ಪ್ರಮುಖ ಆರೋಪಿ ರಾಕೇಶ್ ಎಂಬಾತ ಈ ಇಬ್ಬರನ್ನು ಸಂಪರ್ಕಿಸಿ ಗಾಂಜಾ ಮಾರಾಟ ಮಾಡುವಂತೆ ಸೂಚನೆ ನೀಡುತ್ತಿದ್ದನು ಎಂಬುದು ಬೆಳಕಿಗೆ ಬಂದಿದೆ. ರಾಕೇಶ್ ವಾಟ್ಸ್ಆಪ್ ಮೂಲಕಲೇ ಡ್ರಗ್ ಡೀಲ್ಗಳನ್ನು ಆಪರೇಟ್ ಮಾಡುತ್ತಿದ್ದನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ರಾಕೇಶ್ ಬಂಧನಕ್ಕಾಗಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ, ಮೊದಲು ಈ ಇಬ್ಬರು ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬಂಧಿತರಿಂದ ಸುಮಾರು 21 ಕೆಜಿ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾದ ರಾಕೇಶ್ ಹಾಗೂ ಸುಕ್ರ ವರ್ಮಾ ಎಂಬುವರನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದು, ವಿವೇಕನಗರ ಪೊಲೀಸರ ಮುಂದುವರೆದ ತನಿಖೆ ನಡೆಯುತ್ತಿದೆ.



