ಹುಬ್ಬಳ್ಳಿ: ನಗರದಲ್ಲಿ ನಡೆದಿರುವ ಬಿಜೆಪಿ ಕಾರ್ಯಕರ್ತೆಯ ಬಂಧನ ಪ್ರಕರಣ ಇದೀಗ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕೇಶ್ವಾಪುರ ಪೊಲೀಸರು ಮಹಿಳೆಯನ್ನು ವಿವಸ್ತ್ರಗೊಳಿಸಿ ಥಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಕಾಂಗ್ರೆಸ್‌ನ ನಗರ ಪಾಲಿಕೆ ಸದಸ್ಯರೊಬ್ಬರು ನೀಡಿದ ದೂರಿನ ಮೇರೆಗೆ ಪೊಲೀಸರು ಮಹಿಳೆಯನ್ನು ಬಂಧಿಸಲು ಮುಂದಾಗಿದ್ದಾರೆ ಎನ್ನಲಾಗುತ್ತಿದ್ದು, ಈ ವೇಳೆ ಪೊಲೀಸರು ಅತಿರೇಕವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬಂಧನಕ್ಕೆ ವಿರೋಧ ವ್ಯಕ್ತಪಡಿಸಿದ ಮಹಿಳೆಯ ಮೇಲೆ ಕ್ರೌರ್ಯ ತೋರಲಾಗಿದೆ ಎಂದು ಬಿಜೆಪಿ ವಲಯ ಆರೋಪಿಸಿದೆ.
ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ನಡೆದ ಗಲಾಟೆಯೇ ಈ ಪ್ರಕರಣದ ಹಿನ್ನೆಲೆ ಎನ್ನಲಾಗುತ್ತಿದೆ. ಬೂತ್ ಅಧಿಕಾರಿಗಳೊಂದಿಗೆ ತೆರಳಿದ್ದ ಬಿಜೆಪಿ ಕಾರ್ಯಕರ್ತೆ, ತಮ್ಮ ಮತಗಳನ್ನು ಉದ್ದೇಶಪೂರ್ವಕವಾಗಿ ತೆಗೆದುಹಾಕಲಾಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದರು. ಈ ವಿಚಾರದಲ್ಲಿ ಬಿಜೆಪಿ–ಕಾಂಗ್ರೆಸ್ ನಡುವೆ ನಿರಂತರ ತಿಕ್ಕಾಟ ನಡೆಯುತ್ತಲೇ ಇತ್ತು.
ಈ ಗಲಾಟೆಯನ್ನು ಆಧಾರ ಮಾಡಿಕೊಂಡು ಕಾಂಗ್ರೆಸ್‌ನ ನಗರ ಪಾಲಿಕೆ ಸದಸ್ಯ ಸುವರ್ಣ ಕಲ್ಲಕುಂಟ್ಲಾ ದೂರು ನೀಡಿದ್ದರು. ಪೊಲೀಸರು ಆ ದೂರಿನ ಮೇರೆಗೆ ಬಿಎನ್‌ಎಸ್ ಸೆಕ್ಷನ್ 307 ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅದೇ ಪ್ರಕರಣದಲ್ಲಿ ಮಹಿಳೆಯನ್ನು ಬಂಧಿಸಲು ಮುಂದಾದಾಗ ಆಕೆ ಪ್ರತಿರೋಧ ತೋರಿದ್ದಾಳೆ.
ಆ ಸಂದರ್ಭದಲ್ಲಿ ಪೊಲೀಸರು ಮಹಿಳೆಯನ್ನು ಥಳಿಸಿದ್ದು ಮಾತ್ರವಲ್ಲದೆ, ಬಂಧನ ವೇಳೆ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪದ ಮೇಲೆ ಮತ್ತೊಂದು ದೂರು ದಾಖಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯನ್ನು ಜೈಲಿಗೆ ಕಳುಹಿಸಲಾಗಿದೆ.
ಘಟನೆ ಇದೀಗ ಮಹಿಳಾ ಸುರಕ್ಷತೆ, ಪೊಲೀಸ್ ದೌರ್ಜನ್ಯ ಮತ್ತು ರಾಜಕೀಯ ಹಸ್ತಕ್ಷೇಪ ಕುರಿತಾಗಿ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.



