ವಿಜಯಸಾಕ್ಷಿ ಸುದ್ದಿ, ಮಂಡ್ಯ: ಸಾಹಿತ್ಯದ ಮೂಲಕ ರಾಜಕಾರಣವನ್ನು ಬದಲಾಯಿಸಲು ಸಾಧ್ಯವಿದೆ. ಸಾಹಿತ್ಯ ಕ್ಷೇತ್ರದಲ್ಲಿರುವವರು ರಾಜಕಾರಣಕ್ಕೆ ಸೂಕ್ತ ಮಾರ್ಗದರ್ಶನ ಮಾಡಬೇಕಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಅಭಿಪ್ರಾಯಪಟ್ಟರು.
೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ೨ನೇ ದಿನವಾದ ಶನಿವಾರ ರಾಜಮಾತೆ ಕೆಂಪನAಜಮ್ಮಣಿ ಮತ್ತು ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರಧಾನ ವೇದಿಕೆಯಲ್ಲಿ ನಡೆದ ‘ಸಾಹಿತ್ಯದಲ್ಲಿ ರಾಜಕೀಯ: ರಾಜಕೀಯದಲ್ಲಿ ಸಾಹಿತ್ಯ’ ಕುರಿತ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ-ಮಹಾರಾಜರ ಕಾಲದಿಂದಲೂ ಸಾಹಿತ್ಯ ಪೋಷಣೆಯಾಗುತ್ತಿದೆ. ರಾಜಕಾರಣದ ಮೇಲೆ ಸಾಹಿತ್ಯ ಸಾಕಷ್ಟು ಪ್ರಭಾವ ಉಂಟುಮಾಡಿದೆ. ಸಾಹಿತಿಗಳೂ ಆಗಿದ್ದ ಗಾಂಧೀಜಿಯವರ ಚಿಂತನೆಗಳು ಸಮಾಜದ ಬದಲಾವಣೆಗೆ ಕಾರಣವಾಗಿವೆ. ವಿಧಾನಸಭೆ, ವಿಧಾನಪರಿಷತ್ತಿನಲ್ಲಿ ಮಾಡಲಾಗುವ ಮೌಲಿಕ ಭಾಷಣವನ್ನು ಸಾಹಿತ್ಯದ ಭಾಗವಾಗಿ ಏಕೆ ಪರಿಗಣಿಸಬಾರದು? ನೆಹರೂ ಅವರು ಸಂಸತ್ತಿನಲ್ಲಿ ಮಾಡಿದ ಭಾಷಣ ಮೈ ನವಿರೇಳಿಸುತ್ತದೆ. ರಾಜಕಾರಣ ಮತ್ತು ಸಾಹಿತ್ಯಕ್ಕೂ ಸಂಬAಧ ಇಲ್ಲ ಎನ್ನಬಾರದೆಂಬ ಅನಿಸಿಕೆಯನ್ನು ಸಚಿವರಾದ ಎಚ್.ಕೆ. ಪಾಟೀಲ ವ್ಯಕ್ತಪಡಿಸಿದರು.
ರಾಜಕಾರಣಿಗಳಿಗಿರಬೇಕಾದ ಸಾಹಿತ್ಯ ಪ್ರಜ್ಞೆ ಕುರಿತು ವಿಷಯ ಮಂಡನೆ ಮಾಡಿದ ರಾಜಕೀಯ ಚಿಂತಕರಾದ ಡಾ. ಕೆ. ಅನ್ನದಾನಿ ಅವರು, ಅನುಭವ ಮಂಟಪ ಎಂಬ ಮೊದಲ ಸಂಸತ್ತು ರಚಿಸಿದ ಹೆಗ್ಗಳಿಕೆ ಬಸವಣ್ಣನವರದ್ದು. ಅವರು ತಾರತಮ್ಯವನ್ನು ಹೋಗಲಾಡಿಸಿದರು. ನಾನೂ ಕೂಡ ಸಾಹಿತ್ಯದೊಂದಿಗೆ ನಂಟು ಇಟ್ಟುಕೊಂಡಿದ್ದೇನೆ ಎಂದರು
ರಾಜಕೀಯ ವಿಶ್ಲೇಷಕರಾದ ರವೀಂದ್ರ ರೇಷ್ಮೆ ಅವರು ಸಾಹಿತ್ಯ ಕೃತಿಗಳಲ್ಲಿ ಕಂಡು ಬರುವ ರಾಜಕೀಯ ಚಿತ್ರಣ ಕುರಿತು ವಿಷಯ ಮಂಡನೆ ಮಾಡಿದರು. ಕಾರ್ಯಕ್ರಮದಲ್ಲಿ ಸಮ್ಮೇಳನದ ಅಧ್ಯಕ್ಷರಾದ ನಾಡೋಜ ಡಾ. ಗೊ.ರು. ಚನ್ನಬಸಪ್ಪ, ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಡಾ. ಮಹೇಶ್ ಜೋಶಿ, ಶಾಸಕರಾದ ನರೇಂದ್ರಸ್ವಾಮಿ, ಜಿಲ್ಲಾಧಿಕಾರಿಗಳಾದ ಕುಮಾರ ಸೇರಿದಂತೆ ಇನ್ನಿತರ ಗಣ್ಯಮಾನ್ಯರು ಉಪಸ್ಥಿತರಿದ್ದರು.
ಆಶಯ ನುಡಿಗಳನ್ನಾಡಿದ ರಾಜಕೀಯ ಚಿಂತಕರಾದ ಬಿ.ಎಲ್. ಶಂಕರ್, ಗಾಂಧೀಜಿ ಅವರ ವಿಚಾರ, ಡಾ. ಬಿ.ಆರ್. ಅಂಬೇಡ್ಕರ್ ಅವರ ವಿದ್ವತ್ತು ಸಾಹಿತ್ಯ ರಚನೆ ಚಿಂತನೆ ಮೇಲೆ ಅಗಾಧ ಪರಿಣಾಮ ಬೀರಿವೆ. ಸ್ವಾತಂತ್ರ್ಯ ಮತ್ತು ಸ್ವಾತಂತ್ರ್ಯದ ನಂತರ ಅನೇಕ ರಾಜಕೀಯ ಬರಹಗಳನ್ನು ನಾವು ಕಾಣಬಹುದು. ರಾಜಕಾರಣದ ಮೇಲೆ ಪ್ರಭಾವ ಬೀರಿದ ಅಂಕಣಕಾರರನ್ನು ನೋಡಿದ್ದೇವೆ ಎಂದರು.