ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ದಳಪತಿ ವಿಜಯ್ ತಮ್ಮ ಸಿನಿ ಜೀವನದ ಅಂತಿಮ ಹಂತದಲ್ಲಿದ್ದಾರೆ. ರಾಜಕೀಯ ಪ್ರವೇಶದ ನಂತರ ಅವರು ಸಂಪೂರ್ಣವಾಗಿ ರಾಜಕಾರಣಕ್ಕೆ ಸಮರ್ಪಿತರಾಗುವ ಮೊದಲು ನಟಿಸಿದ ಕೊನೆಯ ಸಿನಿಮಾ ಜನ ನಾಯಗನ್.
ಸಂಕ್ರಾಂತಿ ವೇಳೆ ಬಿಡುಗಡೆ ಆಗಬೇಕಿದ್ದ ಈ ಚಿತ್ರಕ್ಕೆ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ಪ್ರಮಾಣ ಪತ್ರ ಸಿಗದೇ ಚಿತ್ರ ತಡೆಗೊಳಿಸಲಾಗಿದೆ. ಇದರ ಹಿಂದೆ ರಾಜಕೀಯ ಒತ್ತಡವಿದೆ ಎಂಬ ಚರ್ಚೆ ಜೋರಾಗಿದೆ.
ಪಿಂಕ್‌ವಿಲ್ಲಾ ವರದಿ ಪ್ರಕಾರ, ಸಿನಿಮಾ ಈಗ ವಿಜಯ್ ಅವರ ಜೂನ್ 22ರ ಹುಟ್ಟುಹಬ್ಬದ ಸಂಭ್ರಮದಲ್ಲಿ, ಜೂನ್ 2026ರಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಚುನಾವಣಾ ಹೊತ್ತಿನಲ್ಲಿ ಚಿತ್ರ ಬಿಡುಗಡೆ ಆಗಬಾರದು ಎಂಬ ಉದ್ದೇಶದಿಂದ ಕೆಲವು ಶಕ್ತಿಗಳು ತಡೆಹಿಡಿಯಲು ಪ್ರಯತ್ನಿಸುತ್ತಿವೆ ಎಂಬ ಮಾತುಗಳು ಕೇಳಿಬರುತ್ತಿವೆ.
ಎಚ್. ವಿನೋತ್ ನಿರ್ದೇಶನದ ಈ ಪಕ್ಕಾ ಪೊಲಿಟಿಕಲ್ ಆಕ್ಷನ್ ಥ್ರಿಲ್ಲರ್, ತೆಲುಗಿನ ಭಗವಂತ ಕೇಸರಿ ರೀಮೇಕ್ ಆಗಿದ್ದರೂ, ವಿಜಯ್ ಅವರ ರಾಜಕೀಯ ಹಾದಿಗೆ ಹೊಂದುವಂತೆ ಹೆಚ್ಚುವರಿ ಅಂಶಗಳನ್ನು ಸೇರಿಸಲಾಗಿದೆ ಎನ್ನಲಾಗಿದೆ.
ವಿಜಯ್ ಅವರ ಪಕ್ಷ ತಮಿಳಗ ವೆಟ್ರಿ ಕಳಗಂ ರಾಜಕೀಯವಾಗಿ ಚುರುಕಾಗುತ್ತಿರುವ ಸಂದರ್ಭದಲ್ಲಿ, ಈ ಸಿನಿಮಾ ಪಕ್ಷದ ಅಜೆಂಡಾಗೆ ಪೂರಕವಾಗಲಿದೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ.
ಚಿತ್ರದಲ್ಲಿ ವಿಲನ್ ಆಗಿ ಬಾಬಿ ಡಿಯೋಲ್, ನಾಯಕಿಯಾಗಿ ಪೂಜಾ ಹೆಗ್ಡೆ ಹಾಗೂ ಪ್ರಮುಖ ಪಾತ್ರದಲ್ಲಿ ಮಮಿತಾ ಬಿಜು ನಟಿಸಿದ್ದಾರೆ. ಸಂಗೀತವನ್ನು ಅನಿರುದ್ಧ್ ರವಿಚಂದ್ರನ್ ನೀಡಿದ್ದಾರೆ.
ಸದ್ಯ ಸಿಬಿಎಫ್ಸಿ ನಿರಾಕರಣೆಗೆ ವಿರೋಧವಾಗಿ ಸಲ್ಲಿಸಿದ ಅರ್ಜಿ ಹೈಕೋರ್ಟ್‌ನಲ್ಲಿ ವಿಚಾರಣೆಯಲ್ಲಿದ್ದು, ಚಿತ್ರವನ್ನು ರಿವ್ಯೂ ಕಮಿಟಿಗೆ ಕಳುಹಿಸಲಾಗಿದೆ. ಆದರೆ ಅಂತಿಮ ತೀರ್ಮಾನ ಇನ್ನೂ ಬಾಕಿಯಿದೆ.



