ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಅವರ ಕಾರು ಚಾಲಕನ ಮೇಲೆ ಬೆಳಗಾವಿ ನಗರದಲ್ಲಿ ಇಬ್ಬರು ದುಷ್ಕರ್ಮಿಗಳು ಚಾಕು ದಾಳಿ ನಡೆಸಿ ಪರಾರಿಯಾಗಿರುವ ಘಟನೆ ನಡೆದಿದೆ.
ಬೆಳಗಾವಿ ತಾಲೂಕಿನ ಬೆಳಗುಂದಿ ಗ್ರಾಮದ ಬಸವಂತ ಕಡೋಲ್ಕರ್ (32) ನಗರದ ಕ್ಲಬ್ ರಸ್ತೆಯಲ್ಲಿ ಕಾರು ನಿಲ್ಲಿಸಿ ಹೊರಗೆ ನಿಂತಿದ್ದಾಗ ಈ ದಾಳಿ ನಡೆದಿದೆ. ಬೈಕ್ನಲ್ಲಿ ಬಂದ ಇಬ್ಬರು ಅಪರಿಚಿತರು ಏಕಾಏಕಿ ಚಾಕು ಹಿಡಿದು ದಾಳಿ ನಡೆಸಿದ್ದಾರೆ.
ಬಸವಂತ ಅವರ ಎದೆ, ಭುಜ ಮತ್ತು ತೊಡೆಯ ಭಾಗದಲ್ಲಿ ಸೇರಿ ನಾಲ್ಕು ಕಡೆ ಚಾಕು ಇರಿತವಾಗಿದೆ. ಗಂಭೀರ ಗಾಯಗೊಂಡ ಅವರನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಘಟನೆಗೆ ಸಂಬಂಧಿಸಿದಂತೆ ಡಿಸಿಪಿ, ಎಸಿಪಿ ಹಾಗೂ ಮೃಣಾಲ್ ಹೆಬ್ಬಾಳ್ಕರ್ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಈ ಘಟನೆ ಬೆಳಗಾವಿ ಕ್ಯಾಂಪ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಸವಂತ ಕಡೋಲ್ಕರ್ ಅವರು ಹಲವು ವರ್ಷಗಳಿಂದ ಮೃಣಾಲ್ ಹೆಬ್ಬಾಳ್ಕರ್ ಅವರ ಕಾರು ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ. ದಾಳಿಯ ಹಿಂದಿನ ಉದ್ದೇಶ ಏನು ಎಂಬುದರ ಬಗ್ಗೆ ತನಿಖೆ ಮುಂದುವರಿದಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.



