ಹಾವೇರಿ: ರಾಜ್ಯದ ಜನರು ಹಾಗೂ ರೈತರ ಹಿತಕ್ಕಾಗಿ ಎಲ್ಲಾ ರಾಜಕೀಯ ಪಕ್ಷಗಳು ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ನೀರಾವರಿ ಯೋಜನೆಗಳ ಜಾರಿಗೆ ಕೇಂದ್ರ ಸರ್ಕಾರದ ಮೇಲೆ ಒಗ್ಗಟ್ಟಾಗಿ ಒತ್ತಡ ಹೇರಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ ನೀಡಿದರು.
ಹಾವೇರಿಯಲ್ಲಿ ಬುಧವಾರ ನಡೆದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಉದ್ಘಾಟನೆ ಹಾಗೂ ವಿವಿಧ ಇಲಾಖೆಗಳ ಕಾಮಗಾರಿಗಳ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೃಷ್ಣಾ ಮೇಲ್ದಂಡೆ, ಮಹದಾಯಿ, ಕಾವೇರಿ ಸೇರಿದಂತೆ ಪ್ರಮುಖ ನೀರಾವರಿ ಯೋಜನೆಗಳು ರಾಜ್ಯದ ಭವಿಷ್ಯಕ್ಕೆ ಅತ್ಯಂತ ಮಹತ್ವದ್ದಾಗಿವೆ ಎಂದರು.
ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿ ಬೇಡ್ತಿ–ವರದಾ ನದಿ ಜೋಡಣೆ ಯೋಜನೆಗೆ ಸಂಬಂಧಿಸಿದಂತೆ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ತಿಳಿಸಿದ ಡಿಸಿಎಂ, ಕೃಷ್ಣಾ ಮೇಲ್ದಂಡೆ ಯೋಜನೆಗೆ ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವ ಅಗತ್ಯವಿದೆ ಎಂದರು. ಮಹದಾಯಿ ವಿಚಾರದಲ್ಲಿ ನ್ಯಾಯಾಧಿಕರಣ ತೀರ್ಪಿನಂತೆ ಕೇಂದ್ರ ಅರಣ್ಯ ಇಲಾಖೆಯಿಂದ ಅನುಮೋದನೆ ದೊರೆತರೆ ರೈತರ ಹೋರಾಟಕ್ಕೆ ಅಂತ್ಯ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜಕೀಯ ಲಾಭಕ್ಕಾಗಿ ರಾಜ್ಯದ ಹಿತಾಸಕ್ತಿಯನ್ನು ಮರೆತರೆ ಸರಿಯಲ್ಲ ಎಂದು ಹೇಳಿದ ಅವರು, ಗೋವಾ ಸೇರಿದಂತೆ ಪಕ್ಕದ ರಾಜ್ಯಗಳ ರಾಜಕಾರಣವನ್ನು ಬದಿಗಿಟ್ಟು ಕರ್ನಾಟಕದ ರೈತರ ಬದುಕಿನ ಬಗ್ಗೆ ಆಲೋಚಿಸಬೇಕಾದ ಸಮಯ ಇದು ಎಂದರು. ಮುಂದಿನ ಎರಡು-ಮೂರು ವರ್ಷ ರಾಜಕಾರಣ ಬದಿಗಿಟ್ಟು ರಾಜ್ಯದ ಅಭಿವೃದ್ಧಿಗೆ ಒಂದಾಗಿ ಕೆಲಸ ಮಾಡೋಣ ಎಂದು ಮನವಿ ಮಾಡಿದರು.



