ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಹೆತ್ತ ತಾಯಿ, ಹೊತ್ತ ಭೂಮಿಯನ್ನು ಹೇಗೆ ಮರೆಯಲು ಸಾಧ್ಯವಿಲ್ಲವೋ, ಅದೇ ರೀತಿ ನಮ್ಮ ನೆಲದ ಧರ್ಮ, ಸಂಸ್ಕಾರ, ಸಂಸ್ಕೃತಿ, ಪರಂಪರೆ, ಆದರ್ಶ ಮೌಲ್ಯಗಳನ್ನು ಎತ್ತಿ ಹಿಡಿಯುವ ಮೂಲಕ ಸಮಾಜದಲ್ಲಿ ಸಮಾನತೆ, ಶಾಂತಿ-ಸಮೃದ್ಧಿ ನೆಲೆಗೊಳ್ಳುವಂತಾಗಬೇಕು. ಅದಕ್ಕಾಗಿ ಲಿಂ. ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳ ವಿಶ್ವ ಶಾಂತಿಯ ಸಂದೇಶ `ಮಾನವ ಧರ್ಮಕ್ಕೆ ಜಯವಾಗಲಿ – ಧರ್ಮದಿಂದಲೇ ವಿಶ್ವಕ್ಕೆ ಶಾಂತಿ’ ಮಂತ್ರ ಎಲ್ಲರ ಉಸಿರಾಗಬೇಕು ಎಂದು ಬಾಳೇಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ಅವರು ಶುಕ್ರವಾರ ಪಟ್ಟಣದ ಶ್ರೀ ಇಟಗಿ ಬಸವೇಶ್ವರ ದೇವಸ್ಥಾನದಲ್ಲಿ ಲಿಂ. ಜ. ವೀರಗಂಗಾಧರ ಶಿವಾಚಾರ್ಯರ 43ನೇ ಪುಣ್ಯಸ್ಮರಣೋತ್ಸವ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ರಾಷ್ಟ್ರದ ಸಂಪತ್ತಾದ ಯುವಕರಲ್ಲಿ ರಾಷ್ಟ್ರಪ್ರೇಮ, ಕರ್ತವ್ಯ ಪ್ರಜ್ಞೆ ಸದಾ ಜಾಗೃತವಾಗಿರಬೇಕು. ವಿಜ್ಞಾನ, ನಾಗರಿಕತೆ ಮತ್ತು ರಾಜಕೀಯ ಸಂಘರ್ಷದಲ್ಲಿ ಧರ್ಮಕ್ಕೆ ಧಕ್ಕೆಯಾಗದಿರಲಿ. ರಾಜಕೀಯದಲ್ಲಿ ಧರ್ಮವಿರಲಿ, ಧರ್ಮದಲ್ಲಿ ರಾಜಕೀಯ ಪ್ರವೇಶವಾಗದಿರಲಿ. ಭೂಲೋಕದ ಶಿವನಾಗಿ ಸಂಚರಿಸಿ ಜನಮನದಲ್ಲಿ ಆಧ್ಯಾತ್ಮದ ಅರಿವನ್ನು ಉಂಟುಮಾಡಿ ಉದ್ಧರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಜಗದ್ಗುರುಗಳು ಧರ್ಮದ ಪುನರುತ್ಥಾನ, ಧರ್ಮಸತ್ಕಾಂತಿ ಮತ್ತು ಲೋಕೋದ್ಧಾರಕ್ಕಾಗಿ ತಮ್ಮನ್ನೇ ಸಮರ್ಪಿಸಿಕೊಂಡಿದ್ದರು ಎಂದರು.
ಈ ವೇಳೆ ಗುರುರಾಜ ಪಾಟೀಲ, ಸುನೀಲ ಮಹಾಂತಶೆಟ್ಟರ, ಚಂಬಣ್ಣ ಬಾಳಿಕಾಯಿ, ಶಿವಲಿಂಗಯ್ಯ ಹಾಲೇವಾಡಿಮಠ, ಚನ್ನಪ್ಪ ಕೋಲಕಾರ, ಸಿ.ಆರ್. ಲಕ್ಕುಂಡಿಮಠ, ಸೋಮಣ್ಣ ಶಿರಹಟ್ಟಿ, ಸುರೇಶ ರಾಚನಾಯ್ಕರ, ಬಸಪ್ಪ ಉಮಚಗಿ, ಡಾ. ಜಯಶ್ರೀ ಹೊಸಮನಿ, ನಿಂಗಪ್ಪ ಜಾವೂರ, ಮಂಜುನಾಥ ಜಲ್ಲಿ, ರುದ್ರುಸ್ವಾಮಿ ಘಂಟಾಮಠ, ವಿರೂಪಾಕ್ಷ ಆದಿ, ಮಯೂರಗೌಡ ಪಾಟೀಲ, ಈರಣ್ಣ ಮುಳಗುಂದ, ಬಂಗಾರಪ್ಪ ಮುಳಗುಂದ, ನಂದೀಶ ಬಂಡಿವಾಡ, ಕಾಶೀನಾಥ ಮುಳಗುಂದ, ಮಲ್ಲೇಶಪ್ಪ ಹೊಟ್ಟಿ, ಮುತ್ತು ಕಟ್ಟಿಗೌಡ್ರ, ರಾಜಶೇಖರ ಶಿಗ್ಲಿಮಠ ಸೇರಿ ಇಟಗಿ ಬಸವೇಶ್ವರ ದೇವಸ್ಥಾನ ಕಮಿಟಿ, ಪಂಚಾಚಾರ್ಯ ಭಜನಾ ಕಮಿಟಿ, ಸದ್ಭಕ್ತ ಮಂಡಳಿ, ಓಣಿಯ ಹಿರಿಯರು, ಮಹಿಳೆಯರು ಪಾಲ್ಗೊಂಡಿದ್ದರು. ಜಯಣ್ಣ ಹೊಟ್ಟಿ, ಸ್ನೇಹಾ ಮಾಲಿಪಾಟೀಲ ನಿರೂಪಿಸಿದರು.
ಜಗದ್ಗುರುಗಳು ಲಕ್ಷ್ಮೇಶ್ವರದ ಬಗ್ಗೆ ಅಪಾರ ಪ್ರೀತಿ, ಗೌರವ ಹೊಂದಿದ್ದು, ಅದರಂತೆ ಈ ಪಟ್ಟಣದ ಜನತೆ ಮಠ-ಪೀಠದೊಂದಿಗೆ ಸದಾ ಭಕ್ತಿ, ಗೌರವ ಭಾವನೆಯೊಂದಿಗೆ ನಡೆದುಕೊಳ್ಳುತ್ತಿರುವುದು ಸಂತಸ. ಲಿ. ಜಗದ್ಗುರುಗಳು ತೋರಿದ ಧರ್ಮ ಮಾರ್ಗದಲ್ಲಿ ಎಲ್ಲರೂ ನಡೆದಾಗ ಮಾತ್ರ ಅವರ ಪುಣ್ಯಸ್ಮರಣೋತ್ಸವ ಸಾರ್ಥಕವಾಗುತ್ತದೆ. ಮುಂದಿನ ವರ್ಷದಿಂದ ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ಪುಣ್ಯಾರಾಧನೆ ಕಾರ್ಯಕ್ರಮ ಮಾಡುವಂತಾಗಬೇಕು ಎಂದು ಶ್ರೀಗಳು ಆಶಿಸಿದರು.