ಮುಂಬೈ:– IAS ಸೇವೆಯಿಂದಲೇ ಪೂಜಾ ಖೇಡ್ಕರ್ ವಜಾ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
1954ರ ಐಎಎಸ್ ನಿಯಮಗಳ 12ನೇ ನಿಯಮದ ಅಡಿಯಲ್ಲಿ ಕೇಂದ್ರ ಸರ್ಕಾರವು ಐಎಎಸ್ ಸೇವೆಯಿಂದ ವಜಾಗೊಳಿಸಿ ಮಹತ್ವದ ಆದೇಶ ಹೊರಡಿಸಿದೆ ಎಂದು ತಿಳಿದುಬಂದಿದೆ.
ವಿಶೇಷಚೇತನ ಹಾಗೂ ಒಬಿಸಿ ಕೋಟಾ ದುರ್ಬಳಕೆ ಮಾಡಿಕೊಂಡಿದ್ದಾರೆಂಬ ಆರೋಪ ಮೇಲೆ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ವಿರುದ್ಧ ಕೇಂದ್ರ ಲೋಕಸೇವಾ ಆಯೋಗ ಈ ಹಿಂದೆ ಎಫ್‌ಐಆರ್ ದಾಖಲಿಸಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪೂಜಾ ಅವರ ಆಯ್ಕೆಯನ್ನು ವಜಾಗೊಳಿಸಿದೆ.
ತಮ್ಮ ಉದ್ಯೋಗ ಭದ್ರತೆಗಾಗಿ ಪೂಜಾ ಖೇಡ್ಕರ್ ನಕಲಿ ದಾಖಲೆ, ಪ್ರಮಾಣ ಪತ್ರಗಳನ್ನ ಸಲ್ಲಿಸಿದ್ದಾರೆ. ಅಲ್ಲದೇ ತಮ್ಮ ಖಾಸಗಿ ಆಡಿ ಕಾರಿಗೆ ರೆಡ್‌ಲೈಟ್ ಮತ್ತು ಮಹಾರಾಷ್ಟ್ರ ಸರ್ಕಾರದ ಲಾಂಛನ ಬಳಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಎಲ್ಲ ಕಾರಣಗಳಿಂದಾಗಿ ಮಹಾರಾಷ್ಟ್ರ ಸರ್ಕಾರ ಅವರ ತರಬೇತಿಯನ್ನು ತಡೆಹಿಡಿದಿತ್ತು.
ವಿಚಾರಣೆಗಾಗಿ ಮಸ್ಸೂರಿಯಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರೀ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್‌ಗೆ ಬರುವಂತೆ ಸೂಚಿಸಿತ್ತು. ವಿಚಾರಣೆ ಬಳಿಕ ಜು.18 ರಂದು ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದ ಯುಪಿಎಸ್‌ಸಿ, ಜು.19ರಂದು ಎಫ್‌ಐಆರ್ ದಾಖಲಿಸಿತ್ತು. ಈ ಬೆನ್ನಲ್ಲೇ ಕೇಂದ್ರ ಸರ್ಕಾರ ಪೂಜಾ ಖೇಡ್ಕರ್ ಅವರನ್ನ ಐಎಎಸ್ ಸೇವಯಿಂದಲೇ ವಜಾಗೊಳಿಸಿದೆ. ಅಲ್ಲದೇ ಮುಂದಿನ ಎಲ್ಲಾ ಯುಪಿಎಸ್‌ಸಿ ಪರೀಕ್ಷೆಗಳಿಗೆ ಶಾಶ್ವತವಾಗಿ ಡಿಬಾರ್ ಮಾಡಿ ಆದೇಶ ಹೊರಡಿಸಿದೆ ಎನ್ನಲಾಗಿದೆ.