ಆರೋಗ್ಯದ ಬಗ್ಗೆ ಅಪಪ್ರಚಾರ: ಸ್ಪಷ್ಟನೆ ನೀಡಿದ ಖ್ಯಾತ ಗಾಯಕಿ ಅರ್ಚನಾ ಉಡುಪ

0
Spread the love

ಕನ್ನಡದ ಖ್ಯಾತ ಗಾಯಕಿ, ನಿರೂಪಕಿ ಮತ್ತು ನಟಿ ಅರ್ಚನಾ ಉಡುಪ ಅವರ ಆರೋಗ್ಯದ ಕುರಿತು ಕೆಲ ದಿನಗಳಿಂದ ಸುದ್ದಿ ಕೇಳಿ ಬಂದಿತ್ತು. ಅರ್ಚನ ಉಡುಪ ಅವರಿಗೆ ಗಂಭೀರ ಆರೋಗ್ಯ ಸಮಸ್ಯೆ ಇದೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ಅಲ್ಲದೇ ಕ್ಯಾನ್ಸರ್‌ ಇದೆ ಎಂದೆಲ್ಲ ಹೇಳಲಾಗಿತ್ತು. ಆದರೆ ಅದು ಯಾವುದೂ ನಿಜವಲ್ಲ. ಆ ಎಲ್ಲ ಗಾಸಿಪ್​ಗಳಿಗೆ ಸಂಬಂಧಿಸಿದಂತೆ ಸ್ವತಃ ಅರ್ಚನಾ ಉಡುಪ ಅವರು ಪ್ರತಿಕ್ರಿಯೆ ನೀಡಿದ್ದಾರೆ.

Advertisement

‘ಎಲ್ಲರಿಗೂ ನಮಸ್ಕಾರ. ನನ್ನನ್ನು ತುಂಬ ದಿನಗಳಿಂದ ಕಾಡುತ್ತಿದ್ದ ಎರಡು ಮುಖ್ಯವಾದ ವಿಚಾರವನ್ನು ಇವತ್ತು ನಾನು ನಿಮ್ಮ ಮುಂದೆ ಹಂಚಿಕೊಳ್ಳಬೇಕು ಅಂತ ಈ ವಿಡಿಯೋ ಮಾಡುತ್ತಿದ್ದೇನೆ. ಈ ವಿಡಿಯೋ ಮಾಡಬೇಕೋ ಬೇಡವೋ? ಇದರಿಂದ ಏನಾದರೂ ಉಪಯೋಗ ಆಗತ್ತೋ ಇಲ್ಲವೋ ಎಂಬ ಅನುಮಾನ ಮನಸ್ಸಿನಲ್ಲಿ ಇತ್ತು. ಆದರೆ ಬರುಬರುತ್ತ ಇದರ ಕಿರಿಕಿರಿ ಜಾಸ್ತಿ ಆಗುತ್ತಿರುವುದರಿಂದ ಈ ವಿಷಯವನ್ನು ನಿಮ್ಮ ಜೊತೆ ಹಂಚಿಕೊಳ್ಳಲೇಬೇಕು ಅಂತ ಅಂದುಕೊಂಡೆ’ ಎನ್ನುವ ಮೂಲಕ ಅರ್ಚನಾ ಉಡುಪ ಅವರು ಮಾತು ಆರಂಭಿಸಿದ್ದಾರೆ.

‘ಮೂರು-ನಾಲ್ಕು ವರ್ಷಗಳ ಹಿಂದೆ ನಾನು ಒಂದು ಸಂದರ್ಶನ ನೀಡಿದ್ದೆ. ನನಗೆ 20 ವರ್ಷಗಳ ಹಿಂದೆ ಗಂಟಲಿನಲ್ಲಿ ಸಣ್ಣ ಸಮಸ್ಯೆ ಉಂಟಾಗಿ ತಿಂಗಳುಗಳ ಕಾಲ ನನಗೆ ಹಾಡಲು ಆಗುತ್ತಾ ಇರಲಿಲ್ಲ ಎಂಬ ವಿಷಯವನ್ನು ಆ ಸಂದರ್ಶನದಲ್ಲಿ ಹೇಳಿಕೊಂಡಿದ್ದೆ. ಆ ತೊಂದರೆಯಿಂದ ನಾನು ಹೇಗೆ ಹೊರಗೆ ಬಂದೆ? ಮತ್ತೆ ಹೇಗೆ ಹಾಡಲು ಶುರು ಮಾಡಿದೆ ಎಂಬುದನ್ನು ನಾಲ್ಕು ಜನಕ್ಕೆ ಉಪಯೋಗ ಆಗಲಿ ಅಂತ ಹಂಚಿಕೊಂಡಿದ್ದೆ. ಪ್ರಚಾರಕ್ಕಾಗಿ ಅವರು ಅದರ ಕ್ಲಿಪ್ ಮಾತ್ರ ಹಾಕಿದ್ದಾರೆ. ಪೂರ್ತಿಯಾಗಿ ಸಂದರ್ಶನ ನೋಡದೇ ಕೇವಲ ಚಿಕ್ಕ ತುಣುಕು ನೋಡಿಕೊಂಡು ನನಗೆ ಹಾಡಲು ಆಗುತ್ತಿಲ್ಲ, ಹಾಡುವುದು ನಿಲ್ಲಿಸಿದ್ದೇನೆ, ಗಂಟಲು ಹೊರಟು ಹೋಗಿದೆ ಅಂತ ತುಂಬ ಜನ ಹಬ್ಬಿಸಿದ್ದಾರೆ’ ಎಂದು ಅರ್ಚನಾ ಉಡುಪ ಹೇಳಿದ್ದಾರೆ.

‘ಇದು ನನ್ನ ಮನಸ್ಸಿಗೆ ತುಂಬ ನೋವು ಕೊಡುತ್ತಿದೆ. ಎಲ್ಲಿ ಹೋದರೂ ನೀವು ಈಗ ಆರೋಗ್ಯವಾಗಿ ಇದ್ದಾರಾ? ಹಾಡುತ್ತಿದ್ದೀರಾ ಅಂತ ಕೇಳುತ್ತಾರೆ. ನಾನು ಈಗ ಮೊದಲಿಗಿಂತ ಹೆಚ್ಚು ಬ್ಯುಸಿ ಆಗಿದ್ದೇನೆ. ಮೊದಲಿಗಿಂತ ಹೆಚ್ಚು ಹಾಡುಗಳನ್ನು ಹೇಳುತ್ತಿದ್ದೇನೆ. ಇನ್ನೊಂದು ಮುಖ್ಯವಾದ ವಿಷಯ ಏನೆಂದರೆ, ಶಾರ್ಟ್​ ಹೇರ್​ ಕಟ್. ಇದನ್ನು ಯಾಕೆ ಮಾಡಿಸಿದ್ದು ಎಂದರೆ, ನಾನು ಒಂದು ಹೊಸ ಧಾರಾವಾಹಿಯಲ್ಲಿ ಪಾತ್ರ ಒಪ್ಪಿಕೊಂಡಿದ್ದೇನೆ. ಆ ಪಾತ್ರಕ್ಕೆ ಇದೇ ರೀತಿಯ ಹೇರ್​ ಕಟ್ ಮಾಡಿಸಿಕೊಳ್ಳಬೇಕು ಅಂತ ಚಾನೆಲ್​​ನವರು ಹೇಳಿದ್ದರಿಂದ ನಾನು ಹೀಗೆ ಮಾಡಿಸಿಕೊಳ್ಳಬೇಕಾಯಿತು’ ಎಂದಿದ್ದಾರೆ ಅರ್ಚನಾ ಉಡುಪ.

‘ನನಗೆ ಯಾವ ಆರೋಗ್ಯದ ಸಮಸ್ಯೆಯೂ ಇಲ್ಲ. ಅವರವರೇ ಏನೇನೋ ಊಹೋಪೋಹಗಳನ್ನು ಮಾಡಿಕೊಂಡು, ನನಗೆ ಕ್ಯಾನ್ಸರ್ ಬಂದಿದೆ ಎಂಬ ಹಂತಕ್ಕೆ ಮಾತನಾಡಿಬಿಟ್ಟಿದ್ದಾರೆ. ಇದರಿಂದ ನನಗಿಂತಲೂ ಹೆಚ್ಚಾಗಿ ನನ್ನ ತಂದೆ-ತಾಯಿಗೆ, ಸಂಬಂಧಿಕರಿಗೆ, ಸ್ನೇಹಿತರಿಗೆ ತುಂಬ ನೋವಾಗಿದೆ. ನಿಮ್ಮೆಲ್ಲರ ಆಶೀರ್ವಾದ ಸದಾ ನನ್ನ ಮೇಲಿರಲಿ. ನಾನು ದೇವರ ದಯೆಯಿಂದ ಗಟ್ಟಿಮುಟ್ಟಾಗಿ, ಆರೋಗ್ಯವಾಗಿದ್ದೇನೆ’ ಎಂದು ಅರ್ಚನಾ ಉಡುಪ ಸ್ಪಷ್ಟನೆ ನೀಡಿದ್ದಾರೆ.

 


Spread the love

LEAVE A REPLY

Please enter your comment!
Please enter your name here