ಅಂಚೆ ಇಲಾಖೆ ಸೇವೆ ಜನರ ಮನೆ ಬಾಗಿಲಿಗೆ: ಪಿ. ಚಿದಾನಂದ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಅಂಚೆ ಇಲಾಖೆಯ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರ ವಿವಿಧ ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಗದಗ ವಿಭಾಗೀಯ ಅಂಚೆ ಅಧೀಕ್ಷಕ ಪಿ. ಚಿದಾನಂದ ಅಭಿಪ್ರಾಯಪಟ್ಟರು.

Advertisement

ಪ್ರಧಾನ ಅಂಚೆ ಕಚೇರಿಯಲ್ಲಿ ಬುಧವಾರ ನಡೆದ ಗದಗ ವಿಭಾಗದ ಪ್ರಶಸ್ತಿ ಪುರಸ್ಕೃತರಿಗೆ ಬಹುಮಾನ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಸ್ತುತ ಪತ್ರ ವ್ಯವಹಾರದ ಜೊತೆಗೆ ಅಂಚೆ ಇಲಾಖೆಯಲ್ಲಿ ಡಿಜಿಟಲೀಕರಣ, ಬ್ಯಾಂಕಿಂಗ್, ವಿಮಾ, ಉಳಿತಾಯ ಖಾತೆ, ಠೇವಣಿ, ಅಪಘಾತ ವಿಮೆ ಸೇರಿದಂತೆ ಹಲವು ಯೋಜನೆಗಳನ್ನು ಪರಿಚಯಿಸಲಾಗುತ್ತಿದೆ. ಅವುಗಳನ್ನು ಹೆಚ್ಚೆಚ್ಚು ಜನರಿಗೆ ತಲುಪಿಸುವ ದಿಸೆಯಲ್ಲಿ ಪ್ರತಿಯೊಬ್ಬ ಅಂಚೆ ಸಿಬ್ಬಂದಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.

ಈಗಾಗಲೇ ಹಲವು ವಿಭಾಗಗಳಲ್ಲಿ ಗದಗ ವಿಭಾಗ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಮುಂಚೂಣಿ ಸ್ಥಾನ ಗಿಟ್ಟಿಸಿಕೊಂಡಿದೆ. ಮಿಷನ್ ಸುರಕ್ಷ ಇದೇ ನ.1ರಿಂದ ಆರಂಭವಾಗಿದೆ. ಈ ವಿಭಾಗದಲ್ಲಿ ನಿರೀಕ್ಷಿತ ಗುರಿ ಸಾಧಿಸುವ ಕಾರ್ಯಕ್ಕೆ ಇನ್ನೂ 48 ದಿನಗಳ ಕಾಲಾವಕಾಶ ಇದೆ. ಹಾಗಾಗಿ ಎಲ್ಲರೂ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದರು.

ನಾಳೆಯಿಂದ 3 ದಿನಗಳ ವಿಶೇಷ ಮೇಳ ಆಯೋಜಿಸಲಾಗಿದೆ. ಸಾರ್ವಜನಿಕರು ಹೆಚ್ಚೆಚ್ಚು ಪಾಲಿಸಿ ಪಡೆದುಕೊಳ್ಳಬೇಕು. 8ಕ್ಕೂ ಹೆಚ್ಚು ವಿಮೆ ಯೋಜನೆಗಳನ್ನು ಒಳಗೊಂಡಿವೆ. ಇದರಿಂದ ಗದಗ ವಿಭಾಗದ ಸಾಧನೆ ವಲಯ ಮತ್ತು ರಾಜ್ಯ, ರಾಷ್ಟ್ರೀಯ ಮಟ್ಟದ ಮುಂಚೂಣಿ ಸಾಧನೆಗೆ ಸಹಕಾರಿಯಾಗಲಿದೆ. ಮುಂಬರುವ ದಿನಗಳಲ್ಲಿಯೂ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ಸಲುವಾಗಿ ಹಲವು ಬಹುಮಾನ ಸಹಿತ ಸ್ಥಾನ ಗಿಟ್ಟಿಸಿಕೊಳ್ಳಲು ಇರುವ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಲು ಮುಂದಾಗಬೇಕು ಎಂದರು.

ಪ್ರಧಾನ ಅಂಚೆ ಪಾಲಕರಾದ ಮಂಜುಳಾ ದೇಗಿನಾಳ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದಕ್ಕೂ ಮುನ್ನ ಗದಗ ಐಪಿಪಿಬಿ ಮ್ಯಾನೇಜರ್ ಆನಂದ ಸಾಗರ, ಗದಗ ಉಪ ವಿಭಾಗದ ಸಹಾಯಕ ಅಧೀಕ್ಷಕರಾದ ಶ್ರೀಕಾಂತ ಜಾದವ, ರೋಣ ಉಪ ವಿಭಾಗದ ನಿರೀಕ್ಷಕ ವೆಂಕಟೇಶರಡ್ಡಿ ಕೊಳ್ಳಿ ಮಾತನಾಡಿದರು. ಪ್ರಶಸ್ತಿ ಪುರಸ್ಕೃತರ ಪರವಾಗಿ ಬಸವರಾಜ ಮಡಿವಾಳ ಮಾತನಾಡಿದರು. ಇದೇ ವೇಳೆ ಅಂಚೆ ಪೇದೆ ಸೇವೆಯಿಂದ ಪದೋನ್ನತಿ ಪಡೆದ ಸರೋಜಾ ಪಟ್ಟಣಶೆಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಗದಗ ವಿಭಾಗೀಯ ಸಹಾಯಕ ಅಂಚೆ ಅಧೀಕ್ಷಕರಾದ ವಿ. ಸುನೀಲಕುಮಾರ ಪಾಲ್ಗೊಂಡಿದ್ದರು. ಅಶಾ ಕುರಿ ಸ್ವಾಗತಿಸಿದರು. ಅಂಚೆ ಸಹಾಯಕ ಬಸವರಾಜ ಶೇಡದ, ಶ್ರೀದೇವಿ ಕಲಕೇರಿ ನಿರೂಪಿಸಿದರು. ಭೀಮಣ್ಣ ದೊಡ್ಡಮನಿ ವಂದಿಸಿದರು.

ಅಂಚೆ ಇಲಾಖೆ ಗದಗ ವಿಭಾಗದಿಂದ ಉಳಿತಾಯ ಪಾಕ್ಷಿಕ ಎರಡು ವಾರಗಳ ವಿಶೇಷ ಮೇಳ ನಡೆಯಲಿದೆ. ಹಾಗಾಗಿ ಎಲ್ಲರೂ ಹೆಚ್ಚೆಚ್ಚು ಖಾತೆ ತೆರೆಯಲು ಮುಂದಾಗಬೇಕು. ಜೊತೆಗೆ ಗ್ರಾಹಕರಿಗೆ ಖಾತೆ ಮುಚ್ಚುವುದನ್ನು ಬಿಡುವಂತೆ ಮನವೊಲಿಸಲು ಮುಂದಾಗಬೇಕು. ಗದಗ ವಿಭಾಗದ ನಿಗದಿತ ಗುರಿ ಸಾಧನೆಯ ಹಿನ್ನೆಲೆಯಲ್ಲಿ ರಾಜ್ಯ ಮಟ್ಟದಲ್ಲಿ ಉಳಿತಾಯ ಸೇರಿದಂತೆ ಎಲ್ಲಾ ವಿಭಾಗಗಳಲ್ಲಿ ಮುಂಚೂಣಿ ಸ್ಥಾನ ಹೊಂದಿದೆ. ಆದರೆ, ಪ್ರಸ್ತುತ ಇನ್ನೂ ಹೆಚ್ಚೆಚ್ಚು ಖಾತೆ ಆರಂಭಕ್ಕೆ ಮುಂದಾಗಬೇಕು ಎಂದು ಪಿ. ಚಿದಾನಂದ ಹೇಳಿದರು.

 


Spread the love

LEAVE A REPLY

Please enter your comment!
Please enter your name here