ಜಿಎಸ್‌ಟಿ ಸರಳೀಕರಣದಿಂದ ರಾಜ್ಯಗಳಿಗೆ ನಷ್ಟ ಸಾಧ್ಯತೆ

0
Spread the love

ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ಜಿಎಸ್‌ಟಿ ಸರಳೀಕರಣ ವ್ಯವಸ್ಥೆಯಿಂದ ರಾಜ್ಯಗಳ ಆದಾಯದಲ್ಲಿ 85,000 ಕೋಟಿಯಿಂದ 2.5 ಲಕ್ಷ ಕೋಟಿವರೆಗೆ ನಷ್ಟ ಉಂಟಾಗಲಿದ್ದು, ಜಿಎಸ್‌ಟಿ ಸ್ಥಿರಗೊಳ್ಳುವವರೆಗೆ ಜಿಎಸ್‌ಟಿ ಕೌನ್ಸಿಲ್ ನಷ್ಟ ಪರಿಹಾರ ನೀಡಲಿ ಎಂದು ಸಚಿವ ಕೃಷ್ಣ ಬೈರೇಗೌಡ ಒತ್ತಾಯಿಸಿದರು.

Advertisement

`ಜಿಎಸ್‌ಟಿ ಸರಳೀಕರಣ ಹಾಗೂ ರಾಜ್ಯಗಳ ಸ್ವಾಯತ್ತತೆ’ಗೆ ಸಂಬಂಧಿಸಿ ಶುಕ್ರವಾರ ದೆಹಲಿಯ ಕರ್ನಾಟಕ ಭವನದಲ್ಲಿ ಸಮಾನ ಮನಸ್ಕ ಎಂಟು ರಾಜ್ಯಗಳ ಸಚಿವರು ಹಾಗೂ ಅಧಿಕಾರಿಗಳ ಸಭೆಯ ನಂತರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, ಜಿಎಸ್‌ಟಿ ಕೌನ್ಸಿಲ್ ನಮ್ಮ ಮುಂದಿಟ್ಟಿರುವ ಜಿಎಸ್‌ಟಿ ತೆರಿಗೆ ಸರಳೀಕರಣ ವ್ಯವಸ್ಥೆಯನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಈ ವ್ಯವಸ್ಥೆ ರಾಜ್ಯಗಳ ತೆರಿಗೆ ಆದಾಯವನ್ನು ರಕ್ಷಿಸುವಂತಿರಬೇಕು ಹಾಗೂ ಇದರ ಸಂಪೂರ್ಣ ಲಾಭ ದೇಶದ ಜನಸಾಮಾನ್ಯರಿಗೆ ಸಿಗುವಂತಿರಬೇಕೇ ಹೊರತು ಕೆಲವು ಕಂಪೆನಿಗಳಿಗೆ ಮಾತ್ರ ಲಾಭ ಆಗುವಂತಿರಬಾರದು ಎಂದು ಅಭಿಪ್ರಾಯಪಟ್ಟರು.

ಪ್ರಸ್ತಾವಿತ ಜಿಎಸ್‌ಟಿ ಸರಳೀಕರಣದಿಂದ ರಾಜ್ಯ ಸರ್ಕಾರಗಳಿಗೆ ಯಾವ ಪ್ರಮಾಣದಲ್ಲಿ ಆದಾಯ ಖೋತಾ ಆಗಬಹುದು ಎಂಬ ಅಂದಾಜಿನ ಕುರಿತು ಕೇಂದ್ರ ಸರ್ಕಾರ ಈವರೆಗೆ ಯಾವುದೇ ಮಾಹಿತಿ ನೀಡಿಲ್ಲ. ರಾಜ್ಯ ಸರ್ಕಾರಗಳಿಗೆ ಆದಾಯ ನಷ್ಟ ಉಂಟಾದರೆ ಕೇಂದ್ರ ಸರ್ಕಾರಕ್ಕೂ ನಷ್ಟವಾಗಲಿದೆ. ಹೀಗಾಗಿ ಜಿಎಸ್‌ಟಿ ಸ್ಥಿರಗೊಳ್ಳುವವರೆಗೆ ಕೇಂದ್ರ ಸರ್ಕಾರ ತಮ್ಮ ಖಜಾನೆಯಿಂದ ಒಂದು ರೂಪಾಯಿಯನ್ನೂ ನೀಡುವ ಅಗತ್ಯವಿಲ್ಲ. ಬದಲಿಗೆ ಜಿಎಸ್‌ಟಿ ಕೌನ್ಸಿಲ್ ಪರಿಧಿಯಲ್ಲೇ ಪ್ರತಿಯೊಂದು ರಾಜ್ಯಗಳಿಗೂ ಪರಿಹಾರ ನೀಡಲಿ ಎಂದು ಒತ್ತಾಯಿಸಿದರು.

ಜಿಎಸ್‌ಟಿ ತೆರಿಗೆ ವ್ಯವಸ್ಥೆಯನ್ನು 2017ರಲ್ಲಿ ಪರಿಚಯಿಸುವಾಗ ಕೇಂದ್ರ ಸರ್ಕಾರ ಜಿಎಸ್‌ಟಿ ಸ್ಥಿರಗೊಳ್ಳುವವರೆಗೆ ರಾಜ್ಯಗಳಿಗೆ ತೆರಿಗೆ ನಷ್ಟ ಪರಿಹಾರ ನೀಡಬೇಕು ಎಂದು ಹೇಳಿತ್ತು. ಆದರೆ, ಪರಿಹಾರ ವ್ಯವಸ್ಥೆಯನ್ನು 2022ಕ್ಕೆ ತೆಗೆದುಹಾಕಲಾಗಿತ್ತು. ಪರಿಣಾಮ ಬಹುಪಾಲು ರಾಜ್ಯಗಳು ಶೇ.25ರಷ್ಟು ಆದಾಯ ನಷ್ಟ ಎದುರಿಸಿದ್ದವು. ರಾಜ್ಯಗಳ ಆದಾಯ ಶೇ.25ರಷ್ಟು ಕುಸಿಯುತ್ತಿದ್ದ ಸಂದರ್ಭದಲ್ಲಿ ಜಿಎಸ್‌ಟಿ ಸ್ಥಿರಗೊಂಡಿದೆ ಎಂದು ಹೇಗೆ ಹೇಳುತ್ತೀರಿ ಎಂದು ಪ್ರಶ್ನಿಸಿದರು.

ರಾಜ್ಯಗಳಿಗೆ ಅಧಿಕ ನಷ್ಟವಾದರೆ ಅಂತಿಮವಾಗಿ ಜನ ಸಾಮಾನ್ಯರು ಸಂಕಷ್ಟಕ್ಕೆ ಒಳಗಾಗುತ್ತಾರೆ. ರಾಜ್ಯಗಳ ಸ್ವಾಯತ್ತತೆ ಮುಖ್ಯವಾದ ವಿಚಾರ. ಪ್ರತಿಯೊಂದು ರಾಜ್ಯಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸುಸ್ಥಿರ ಆದಾಯ ಅತ್ಯಂತ ಮುಖ್ಯ. ಆದರೆ, ಆದಾಯ ಕೊರತೆ ಉಂಟಾಗಿ ಸ್ವಂತ ಸರ್ಕಾರ ನಡೆಸಲು ಕೇಂದ್ರದ ಕಡೆ ಕೈಚಾಚುವಂತಾದರೆ ರಾಜ್ಯಗಳ ಸ್ವಾಯತ್ತತೆ ಎಂಬ ಪದವೇ ಅರ್ಥ ಕಳೆದುಕೊಳ್ಳುತ್ತದೆ. ಸಹಕಾರಿ ಒಕ್ಕೂಟವಾದ ಪದಗಳಲ್ಲಿ ಮಾತ್ರವಲ್ಲದೆ ಕೆಲಸದಲ್ಲೂ ಚಾಲ್ತಿ ಇದ್ದರೆ ಮಾತ್ರ ಸ್ವಾಯತ್ತತೆ ಉಳಿಯಲು ಸಾಧ್ಯ ಎಂದು ಸಚಿವ ಕೃಷ್ಣ ಬೈರೇಗೌಡ ವ್ಯಾಖ್ಯಾನಿಸಿದರು.


Spread the love

LEAVE A REPLY

Please enter your comment!
Please enter your name here