ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ರಾಜ್ಯ ಸರಕಾರದ ನಿರ್ದೇಶನದಂತೆ ಪಹಣಿ ಪತ್ರಿಕೆಗಳಲ್ಲಿ ಪೋತಿಯಾದ ಖಾತಾ ಪ್ರಕರಣಗಳ ಇತ್ಯರ್ಥಕ್ಕಾಗಿ ಪೋತಿ ಆಂದೋಲನವನ್ನು ಜಾರಿಗೊಳಿಸಿದ್ದು, ಇದರ ಪ್ರಯುಕ್ತ ಶಿರಹಟ್ಟಿ ತಾಲೂಕಿನಲ್ಲಿ ತಾಲೂಕಾಡಳಿತದ ವತಿಯಿಂದ ಪೋತಿ ಆಂದೋಲನ ಯಶಸ್ವಿಗೆ ಗ್ರಾಮ ಆಡಳಿತ ಅಧಿಕಾರಿಗಳು ಪೋತಿಯಾಗಿರುವ ಕುಟುಂಬಗಳ ಮನೆ ಮನೆಗೆ ಭೇಟಿ ನೀಡುತ್ತಿದ್ದಾರೆ.
ಶಿರಹಟ್ಟಿ ತಾಲೂಕಿನಲ್ಲಿ ಕಂದಾಯ ಇಲಾಖೆಯ ವತಿಯಿಂದ ಪಹಣಿಗಳಲ್ಲಿ ಗ್ರಾಮವಾರು ಪೋತಿಯಾಗಿರುವವರ ಪಟ್ಟಿ ಮಾಡಿದ ಪ್ರಕಾರ 5396 ಕುಟುಂಬಗಳ ಪೈಕಿ ಈಗಾಗಲೇ 2454 ಅರ್ಜಿಗಳನ್ನು ಸಂಬಂಧಿಸಿದ ವಾರಸುದಾರರಿಗೆ ಹಕ್ಕು ದಾಖಲೆ ಮಾಡಿಕೊಡಲಾಗಿದ್ದು, ಇನ್ನೂ 2942 ಅರ್ಜಿಗಳನ್ನು ಇತ್ಯರ್ಥಪಡಿಸುವುದಕ್ಕೆ ಗ್ರಾಮ ಆಡಳಿತ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಸಂಬಂಧಿಸಿದ ವಾರಸುರಾರರ ಅವಶ್ಯಕ ದಾಖಲೆಯನ್ನು ಪಡೆದು ಸ್ಥಳದಲ್ಲಿಯೇ ಸರಕಾರ ಅಭಿವೃದ್ಧಿಪಡಿಸಿದ ಮೊಬೈಲ್ ಆ್ಯಪ್ ಮೂಲಕ ಅರ್ಜಿಗಳನ್ನು ಅಪ್‌ಲೋಡ್ ಮಾಡಿ, 15 ದಿನಗಳಲ್ಲಿ ಸಂಬಂಧಿಸಿದ ವಾರಸುದಾರರಿಗೆ ಪಹಣಿ ಪತ್ರಿಕೆಗಳನ್ನು ನೀಡಲಿದ್ದಾರೆ.
ಈ ಆಂದೋಲನದ ಕುರಿತು ಗ್ರಾಮೀಣ ಭಾಗಗಳಲ್ಲಿಯ ಜನತೆಗೆ ಹೆಚ್ಚಿನ ರೀತಿಯಲ್ಲಿ ಜಾಗೃತಿ ಮೂಡಿಸುವುದು ಅವಶ್ಯವಿದ್ದು, ತಾಲೂಕಾ ಆಡಳಿತ ಈ ಬಗ್ಗೆ ಹೆಚ್ಚಿನ ಗಮನಹರಿಸಿದಲ್ಲಿ ಆಂದೋಲನ ಯಶಸ್ವಿಯಾಗಲು ಸಾಧ್ಯ.
ಈ ಕುರಿತು ಪ್ರತಿಕ್ರಿಯಿಸಿದ ತಹಸೀಲ್ದಾರ ಕೆ.ರಾಘವೇಂದ್ರ ರಾವ್, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವುದಕ್ಕಾಗಿ ಪೋತಿ ಆಂದೋಲನದ ಮೂಲಕ ಪಹಣಿಯಲ್ಲಿಯ ಮೃತರ ವಾರಸುದಾರರಿಗೆ ಹಕ್ಕು ದಾಖಲೆಯನ್ನು ನೀಡಲಾಗುತ್ತಿದೆ. ಈ ಸಂದರ್ಭದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳು ತಮ್ಮ ಮನೆಗೆ ಭೇಟಿ ನೀಡಿದಾಗ ಅವಶ್ಯಕ ದಾಖಲೆಗಳನ್ನು ನೀಡಿ ಆಂದೋಲನವನ್ನು ಯಶಸ್ವಿಗೊಳಿಸಲು ಸಹಕರಿಸಬೇಕೆಂದು ವಿನಂತಿಸಿದರು.
ಆಂದೋಲನದ ಯಶಸ್ವಿಗೆ ಸ್ವತಃ ತಹಸೀಲ್ದಾರ ಕೆ.ರಾಘವೇಂದ್ರ ರಾವ್ ನೇತೃತ್ವದ ತಂಡ ಜು.19ರಂದು ಮಾಚೇನಹಳ್ಳಿ ಗ್ರಾಮದಲ್ಲಿ, 21ರಂದು ಇಟಗಿ, 23ರಂದು ಮಜ್ಜೂರ, 28ರಂದು ಕೋಗನೂರ, 31ರಂದು ಹೆಬ್ಬಾಳ, ಅಗಷ್ಟ 2ರಂದು ನಾಗರಮಡುವು, 11ರಂದು ರಣತೂರ, 13ರಂದು ಬೆಳ್ಳಟ್ಟಿ, 19ರಂದು ಹೊಸೂರ, 22ರಂದು ವಡವಿ, 29ರಂದು ಚಿಕ್ಕಸವಣೂರ, ಸೆಪ್ಟೆಂಬರ್ 3ರಂದು ತಾರೀಕೊಪ್ಪ, 8ರಂದು ಸಾಸರವಾಡ, 11ರಂದು ಕಡಕೋಳ, 15ರಂದು ಬನ್ನಿಕೊಪ್ಪ, 16ರಂದು ಶಿರಹಟ್ಟಿ ಪಟ್ಟಣದಲ್ಲಿ ವಿಶೇಷ ಕ್ಯಾಂಪ್‌ಗಳನ್ನು ನಿಗದಿಪಡಿಸಲಾಗಿದೆ.