ಬೆಂಗಳೂರು:– ಇಂದು ಡಿಸಿಎಂ ಡಿ.ಕೆ ಶಿವಕುಮಾರ್ ಅವರು ದಿಢೀರ್ ಸಿಟಿ ರೌಂಡ್ಸ್ ಮಾಡಿ, ಗುಂಡಿ ಮುಚ್ಚಿರುವ ರಸ್ತೆಗಳನ್ನ ಪರಿಶೀಲಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದರು.
ನಗರದಲ್ಲಿ ಗುಂಡಿ ಗಂಡಾಂತರ ಮುಂದುವರೆದಿದ್ದು, ಗುಂಡಿಯಿಂದ ಸರ್ಕಾರಕ್ಕೆ ತೀವ್ರ ಮುಜುಗರ ಉಂಟಾಗಿದೆ. ಹೀಗಾಗಿ ಖುದ್ದು ಡಿಸಿಎಂ ಡಿಕೆ ಶಿವಕುಮಾರ್ ಅವರೇ ಸಿಟಿ ರೌಂಡ್ಸ್ ಮಾಡಿ ಪರಿಶೀಲಿಸಿದರು. ಚಾಲುಕ್ಯ ಸರ್ಕಲ್, ಚಿನ್ನಸ್ವಾಮಿ ಮೈದಾನ ರಸ್ತೆ, ಶಾಂತಿನಗರ ರಸ್ತೆಯಲ್ಲಿ ರಸ್ತೆಗೆ ಹಾಕಿದ್ದ ಡಾಂಬರು ಗುಣಮಟ್ಟ ಪರಿಶೀಲಿಸಿದರು. ಜೆಸಿ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಪರಿಶೀಲಿಸಿದ ಡಿಸಿಎಂ ಕಾಮಗಾರಿಯನ್ನ ಆದಷ್ಟು ಬೇಗ ಮುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬನಶಂಕರಿ ಮೆಟ್ರೋ ಸಮೀಪದ ಬಿಬಿಎಂಪಿಯ ಖಾಲಿ ಜಾಗವನ್ನೂ ಡಿಸಿಎಂ ಪರಿಶೀಲನೆ ಮಾಡಿದರು. ಈ ಜಾಗ ಪಾಲಿಕೆಯದ್ದಾಗಿದ್ದು, ಬೆಂಗಳೂರು ದಕ್ಷಿಣ ಪಾಲಿಕೆ ಕಚೇರಿ ಕಟ್ಟಡ ನಿರ್ಮಾಣಕ್ಕೆ ಇಲ್ಲಿ ಪ್ಲ್ಯಾನ್ ಮಾಡಲಾಗ್ತಿದೆ. ಜಾಗದ ವಿಸ್ತೀರ್ಣ ಹಾಗೂ ಅನುಕೂಲತೆಗಳ ಬಗ್ಗೆ ಡಿಸಿಎಂಗೆ ಅಧಿಕಾರಿಗಳು ಮಾಹಿತಿ ನೀಡಿದರು.
ಗುಂಡಿಗಳನ್ನ ಮುಚ್ಚುವಂತೆ ಅಧಿಕಾರಿಗಳಿಗೆ ಟಾಸ್ಕ್ ನೀಡಲಾಗಿತ್ತು. ಅದರಂತೆ ನಗರದ ಹಲವೆಡೆ ಗುಂಡಿಗಳನ್ನ ಮುಚ್ಚಲಾಗಿತ್ತು. ಇನ್ನೂ ಹಲವು ಕಡೆ ಗುಂಡಿಗಳಿದ್ದು, ಅವುಗಳನ್ನು ತ್ವರಿತವಾಗಿ ಮುಚ್ಚುವಂತೆ ಅಧಿಕಾರಿಗಳಿಗೆ ಡಿಕೆಶಿ ಖಡಕ್ ಸೂಚನೆ ನೀಡಿದ್ದಾರೆ.