ಕಾರವಾರ:– ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಐದು ಸರ್ಕಾರಿ ಕಚೇರಿಗಳಿಗೆ ವಿದ್ಯುತ್ ಪೂರೈಕೆ ಸಂಸ್ಥೆ ಪವರ್ ಕಟ್ ಮಾಡಿದೆ.
ಕಳೆದ ಏಳು ತಿಂಗಳಿನಿಂದ ಈ ಕಚೇರಿಗಳ ವಿದ್ಯುತ್ ಬಿಲ್ ಲಕ್ಷಾಂತರ ರೂಪಾಯಿಗೆ ತಲುಪಿದ್ದರೂ, ಪಾವತಿ ಮಾಡದ ಕಾರಣದಿಂದ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಕಾರವಾರ, ಭಟ್ಕಳ, ಸಿರ್ಸಿ, ಯಲ್ಲಾಪುರ ಮತ್ತು ಹೋನ್ನಾವರ ತಾಲೂಕುಗಳ ಸರ್ಕಾರಿ ಕಚೇರಿಗಳು ಈ ಕ್ರಮಕ್ಕೆ ಒಳಪಟ್ಟಿವೆ. ಹಲವಾರು ಬಾರಿ ನೋಟಿಸ್ ನೀಡಿದರೂ ಬಿಲ್ ಪಾವತಿ ಆಗದ ಹಿನ್ನೆಲೆಯಲ್ಲಿ, ಇಲಾಖೆ ಅಂತಿಮವಾಗಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದೆ.
ಪವರ್ ಇಲ್ಲದ ಕಾರಣದಿಂದ ಕಚೇರಿಗಳಲ್ಲಿ ಸಿಬ್ಬಂದಿಗಳು ಕತ್ತಲಲ್ಲೇ ಕೆಲಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸಾರ್ವಜನಿಕರ ಕೆಲಸಗಳಿಗೆ ತೊಂದರೆ ಉಂಟಾಗಿರುವುದರಿಂದ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿದ್ಯುತ್ ಪೂರೈಕೆ ಸಂಸ್ಥೆಯ ಅಧಿಕಾರಿಗಳು “ಸರ್ಕಾರಿ ಕಚೇರಿಗಳೂ ಬಿಲ್ ಪಾವತಿಯಲ್ಲಿ ಶಿಸ್ತು ಪಾಲಿಸಬೇಕು. ಬಾಕಿ ಪಾವತಿ ಮಾಡೋ ತನಕ ಪವರ್ ಕನೆಕ್ಟ್ ಮಾಡುವುದಿಲ್ಲ” ಎಂದು ಎಚ್ಚರಿಸಿದ್ದಾರೆ.



