ಮುಂಬೈ:- ಇಲ್ಲಿನ ಚೆಂಬೂರು ಸಮೀಪದ ಮೈಸೂರು ಕಾಲೋನಿಯಲ್ಲಿ ಭಾರೀ ಮಳೆಯಿಂದಾಗಿ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆ ಉಂಟಾಗಿ ಚಲಿಸುತ್ತಿದ್ದ ಮೋನೋ ರೈಲು ಅರ್ಧದಲ್ಲೇ ನಿಂತ ಘಟನೆ ಜರುಗಿದೆ.
ಚೆಂಬೂರ್ ಮತ್ತು ಭಕ್ತಿ ಪಾರ್ಕ್ ನಡುವೆ ಮಂಗಳವಾರ ಸಂಜೆ 7 ಗಂಟೆಯ ಸುಮಾರಿಗೆ ಘಟನೆ ನಡೆದಿದೆ. ಭಾರೀ ಮಳೆಗೆ ತಾಂತ್ರಿಕ ಸಮಸ್ಯೆಯಿಂದಾಗಿ ಮೋನೋ ರೈಲು ಅರ್ಧದಲ್ಲಿ ನಿಂತಿದೆ. ಘಟನೆಯಿಂದ ನೂರಾರು ಪ್ರಯಾಣಿಕರು ರೈಲಿನಲ್ಲಿ ಸಿಲುಕಿದ್ದಾರೆ. ಉಸಿರಾಟಕ್ಕೆ ಸಮಸ್ಯೆಯಾದ ಹಿನ್ನೆಲೆ ಪ್ರಯಾಣಿಕರು ಮೋನೋ ರೈಲಿನ ಗಾಜು ಒಡೆದಿದ್ದಾರೆ.
2 ಕ್ರೇನ್ ಹಾಗೂ ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಪ್ರಯಾಣಿಕರು ಒಡೆದ ಕಿಟಕಿಯ ಮೂಲಕ ಪ್ರಯಾಣಿಕರನ್ನು ರಕ್ಷಣೆ ಮಾಡಲಾಗುತ್ತಿದೆ. 150ಕ್ಕೂ ಹೆಚ್ಚು ಜನರು ರೈಲಿನಲ್ಲಿ ಸಿಲುಕಿದ್ದು, ಎಲ್ಲರನ್ನೂ ಹೊರತರುವ ಕಾರ್ಯ ನಡೆಯುತ್ತಿದೆ. ವಿದ್ಯುತ್ ಸಂಪರ್ಕ ಕಡಿತಗೊಂಡ ಪರಿಣಾಮ ಎಸಿ ಆಫ್ ಆಗಿ ಪ್ರಯಾಣಿಕರಿಗೆ ಉಸಿರಾಟದ ತೊಂದರೆಯುಂಟಾಗಿದೆ. ಈವರೆಗೆ 15 ಮಂದಿಯನ್ನು ರಕ್ಷಿಸಲಾಗಿದೆ. ಸದ್ಯ ಮೋನೋ ರೈಲು ಸೇವೆ ಸ್ಥಗಿತಗೊಂಡಿದೆ.