ನಗುಮೊಗದ ಅರಸ, ಕರ್ನಾಟಕ ರತ್ನ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ನಮ್ಮನ್ನಗಲಿ ಇಂದಿಗೆ ನಾಲ್ಕು ವರ್ಷ ಕಳೆದಿದೆ.
ಪುನೀತ್ ರಾಜ್ ಕುಮಾರ್ ಅವರ 4ನೇ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋದಲ್ಲಿ ವಿಶೇಷ ಸಿದ್ಧತೆಗಳು ನಡೆಯುತ್ತಿವೆ. ಪುನೀತ್ ಅವರ ಸಮಾಧಿಯನ್ನು ಬಣ್ಣ ಬಣ್ಣದ ಗುಲಾಬಿ ಹೂಗಳಿಂದ ಅಲಂಕರಿಸಲಾಗಿದೆ. ದೊಡ್ಮನೆ ಕುಟುಂಬ ಬೆಳಿಗ್ಗೆ 11 ಗಂಟೆಗೆ ಸಮಾಧಿ ಬಳಿ ಪೂಜೆ ನೆರವೇರಿಸಲಿದ್ದು, ಅಪ್ಪುಗೆ ಇಷ್ಟವಾದ ಖಾದ್ಯಗಳನ್ನು ಅರ್ಪಿಸಿ ಪ್ರಾರ್ಥನೆ ಸಲ್ಲಿಸಲಿದ್ದಾರೆ.
ಅಪ್ಪು ಅಭಿಮಾನಿಗಳು ಕಂಠೀರವ ಸ್ಟುಡಿಯೋ ಬಳಿಯಲ್ಲಿ ಇಡೀ ದಿನ ಅನ್ನಸಂತರ್ಪಣೆ ನಡೆಸಿ, ನೇತ್ರದಾನ ಮತ್ತು ರಕ್ತದಾನ ಶಿಬಿರಗಳನ್ನು ಆಯೋಜಿಸಿದ್ದಾರೆ. ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳು ಆಗಮಿಸಿ ತಮ್ಮ ಪ್ರಿಯ ನಟನಿಗೆ ನಮನ ಸಲ್ಲಿಸುತ್ತಿದ್ದಾರೆ. ಅಲ್ಲದೇ, ರಾಜ್ಯಾದ್ಯಂತ ಅನೇಕರು ತಮ್ಮ ತಮ್ಮ ಸ್ಥಳದಲ್ಲಿಯೇ ಅಪ್ಪುಗೆ ಕೃತಜ್ಞತೆ ಹಾಗೂ ಪ್ರೀತಿಯ ನಮನಗಳನ್ನು ಅರ್ಪಿಸುತ್ತಿದ್ದಾರೆ.



