ಬೆಳಗಾವಿ: ಸುದೀರ್ಘ 40 ವರ್ಷಗಳ ಕಾಲ ಕರ್ನಾಟಕ ಲಿಂಗಾಯತ ಎಜುಕೇಶನ್ ಸಂಸ್ಥೆ (ಕೆಎಲ್ಇ)ಯ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಡಾ. ಪ್ರಭಾಕರ ಕೋರೆ ಇದೀಗ ಆ ಸ್ಥಾನದಿಂದ ಹಿಂದೆ ಸರಿದಿದ್ದಾರೆ. ಕೆಎಲ್ಇ ಸಂಸ್ಥೆಯ ಆಡಳಿತ ಮಂಡಳಿಗೆ ಸಲ್ಲಿಸಿದ್ದ ತಮ್ಮ ನಾಮಪತ್ರವನ್ನು ಅಚ್ಚರಿಯಾಗಿ ವಾಪಸ್ ಪಡೆದಿದ್ದಾರೆ.
ಕೆಎಲ್ಇ ನಿರ್ದೇಶಕ ಹುದ್ದೆಗೆ ಡಾ. ಪ್ರಭಾಕರ ಕೋರೆ ಮೊದಲು ನಾಮಪತ್ರ ಸಲ್ಲಿಸಿದ್ದರು. ಆದರೆ, ನಂತರ ದಿಢೀರ್ ನಿರ್ಧಾರವಾಗಿ ನಾಮಪತ್ರ ಹಿಂಪಡೆಯುವ ಮೂಲಕ ಎಲ್ಲರಲ್ಲೂ ಅಚ್ಚರಿಯನ್ನು ಮೂಡಿಸಿದ್ದಾರೆ. 1984ರಲ್ಲಿ ಕೆಎಲ್ಇ ಸಂಸ್ಥೆಯ ನಿರ್ದೇಶಕರಾಗಿ ಆಯ್ಕೆಯಾದ ಅವರು, ಬಳಿಕ ದೀರ್ಘಕಾಲ ಕಾರ್ಯಾಧ್ಯಕ್ಷ ಹುದ್ದೆಯನ್ನು ನಿರ್ವಹಿಸಿದ್ದರು.
ಡಾ. ಪ್ರಭಾಕರ ಕೋರೆ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಕೆಎಲ್ಇ ಸಂಸ್ಥೆ ಕೇವಲ 40 ಅಂಗ ಸಂಸ್ಥೆಗಳನ್ನು ಹೊಂದಿತ್ತು. ಅವರ ನಾಯಕತ್ವದಲ್ಲಿ ಸಂಸ್ಥೆ ಗಣನೀಯವಾಗಿ ವಿಸ್ತರಿಸಿಕೊಂಡು, ಪ್ರಸ್ತುತ 240ಕ್ಕೂ ಹೆಚ್ಚು ಅಂಗ ಸಂಸ್ಥೆಗಳನ್ನು ಹೊಂದಿರುವ ಬೃಹತ್ ಶಿಕ್ಷಣ ಸಂಸ್ಥೆಯಾಗಿ ಬೆಳೆದಿದೆ.
ಕೆಎಲ್ಇ ನಿರ್ದೇಶಕ ಹುದ್ದೆಗೆ ಸ್ಪರ್ಧಿಸಿದ್ದ ಮಹಾಂತೇಶ ಕೌಜಲಗಿ, ಅಮಿತ್ ಕೋರೆ, ಡಾ. ವಿಶ್ವನಾಥ್ ಪಾಟೀಲ ಸೇರಿದಂತೆ ಒಟ್ಟು 14 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದೇ ವೇಳೆ, ಡಾ. ಪ್ರಭಾಕರ ಕೋರೆ ಅವರ ಪುತ್ರಿ ಪ್ರೀತಿ ಕೋರೆ ಅವರು ಕೆಎಲ್ಇ ಸಂಸ್ಥೆಯ ನೂತನ ಕಾರ್ಯಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.
ಪ್ರೀತಿ ಕೋರೆ ಅವರು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಸ್ಥಾನಕ್ಕೇರಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಶತಮಾನಕ್ಕೂ ಅಧಿಕ ಇತಿಹಾಸ ಹೊಂದಿರುವ ದೇಶದ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಕೆಎಲ್ಇ ಸಂಸ್ಥೆಯ ಮುಂದಿನ ಹೊಣೆಗಾರಿಕೆಯನ್ನು ವಹಿಸಿಕೊಳ್ಳಲಿದ್ದಾರೆ.



