ಪ್ರಭಾಸ್ ಅಭಿನಯದ ‘ದಿ ರಾಜಾ ಸಾಬ್’ ಸಿನಿಮಾ ಇಂದು (ಜನವರಿ 09) ಅಧಿಕೃತವಾಗಿ ತೆರೆಕಂಡಿದೆ. ನಿನ್ನೆ ರಾತ್ರಿ ಆಂಧ್ರ ಮತ್ತು ತೆಲಂಗಾಣಗಳಲ್ಲಿ ಪ್ರೀಮಿಯರ್ ಶೋಗಳು ಪ್ರದರ್ಶನಗೊಂಡಿದ್ದು, ಅಭಿಮಾನಿಗಳ ನಿರೀಕ್ಷೆ ಉತ್ತುಂಗಕ್ಕೇರಿತ್ತು. ಆದರೆ ತೆಲಂಗಾಣದಲ್ಲಿ ವಿಶೇಷ ಶೋ ಹಾಗೂ ಟಿಕೆಟ್ ದರ ಹೆಚ್ಚಳಕ್ಕೆ ನ್ಯಾಯಾಲಯದ ಅನುಮತಿ ಪಡೆಯಬೇಕಿದ್ದ ಕಾರಣ, ಪ್ರೀಮಿಯರ್ ಶೋ ಟಿಕೆಟ್‌ಗಳನ್ನು ಕೊನೆಯ ಹಂತದಲ್ಲಿ ಬಿಡುಗಡೆ ಮಾಡಲಾಯಿತು. ಇದು ಅಭಿಮಾನಿಗಳಲ್ಲಿ ಗೊಂದಲ ಹಾಗೂ ಅಸಮಾಧಾನಕ್ಕೆ ಕಾರಣವಾಯಿತು.
ಆಂಧ್ರ ಪ್ರದೇಶದಲ್ಲಿ ಯಾವುದೇ ಅಡಚಣೆ ಇಲ್ಲದೆ ಪ್ರೀಮಿಯರ್ ಶೋಗಳು ನಡೆದರೆ, ತೆಲಂಗಾಣದ ಕೆಲವು ಚಿತ್ರಮಂದಿರಗಳಲ್ಲಿ, ವಿಶೇಷವಾಗಿ ಹೈದರಾಬಾದ್‌ನಲ್ಲಿ, ಶೋಗಳು ಬಹಳ ತಡವಾಗಿ ಆರಂಭವಾದವು. ಇದರಿಂದ ಅಭಿಮಾನಿಗಳ ಆಕ್ರೋಶ ಭುಗಿಲೆದ್ದು, ಕೆಲ ಚಿತ್ರಮಂದಿರಗಳಲ್ಲಿ ಗಲಾಟೆ ನಡೆಯಿತು.
ಹೈದರಾಬಾದ್‌ನ ವಿಮಲ್ ಚಿತ್ರಮಂದಿರದಲ್ಲಿ ಪ್ರಭಾಸ್ ಅಭಿಮಾನಿಗಳು ಶೋ ವಿಳಂಬದ ವಿರುದ್ಧ ತೀವ್ರವಾಗಿ ಪ್ರತಿಕ್ರಿಯಿಸಿ, ಚಿತ್ರಮಂದಿರದ ಗಾಜುಗಳನ್ನು ಒಡೆದಿದ್ದಾರೆ. ನಗರದಲ್ಲಿನ ಇನ್ನೂ ಕೆಲವು ಚಿತ್ರಮಂದಿರಗಳಲ್ಲಿಯೂ ಸಹ ಗಲಾಟೆ ನಡೆದಿದೆ. ಪರಿಸ್ಥಿತಿ ಕೈಮೀರಿದ ಹಿನ್ನೆಲೆಯಲ್ಲಿ ಪೊಲೀಸರು ಲಾಠಿಚಾರ್ಜ್ ನಡೆಸಬೇಕಾಯಿತು. ಈ ವೇಳೆ ಕೆಲ ಅಭಿಮಾನಿಗಳು ಪೊಲೀಸರಿಂದ ಲಾಠಿ ಕಿತ್ತುಕೊಂಡು ಅವರ ಮೇಲೆಯೇ ದಾಳಿ ಮಾಡಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಇತ್ತ ‘ದಿ ರಾಜಾ ಸಾಬ್’ ಸಿನಿಮಾ ಹಾರರ್ ಕಾಮಿಡಿ ಚಿತ್ರವಾಗಿದ್ದು, ಪ್ರಭಾಸ್ ಜೊತೆಗೆ ನಿಧಿ ಅಗರ್ವಾಲ್, ರಿಧ್ಧಿ ಕುಮಾರ್, ಮಾಳವಿಕಾ ಮೋಹನನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಬೊಮನ್ ಇರಾನಿ ಮತ್ತು ಸಂಜಯ್ ದತ್ ಸಹ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ಮಾರುತಿ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಬಹಳ ವರ್ಷಗಳ ಬಳಿಕ ಪ್ರಭಾಸ್ ಹಾಸ್ಯಕ್ಕೆ ಒತ್ತು ನೀಡಿದ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.



