ವಿಜಯಸಾಕ್ಷಿ ಸುದ್ದಿ, ಬೆಂಗಳೂರು : ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಹಗರಣದಿಂದ ನಾಡಿನ ಜನತೆ ತಲೆ ಎತ್ತಿ ನಡೆಯದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಅನೈತಿಕ ವ್ಯವಹಾರವನ್ನು ಹಿಡಿದು ಎರಡು ಪಕ್ಷಗಳು ಆರೋಪ ಪ್ರತ್ಯಾರೋಪ ಮಾಡಿ ಮಾತಿನ ಸಮರ ನಡೆಸುತ್ತಿರುವುದು ನಾಚಿಕೆಗೇಡಿನ ವಿಷಯ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ತಾಹೇರ್ ಹುಸೇನ್ ಅಭಿಪ್ರಾಯಪಟ್ಟಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಹಣ, ಅಧಿಕಾರ ಬಳಸಿ ಅನೈತಿಕ ಸಂಬಂಧ ಬೆಳೆಸಿದ ಪ್ರಜ್ವಲ್ ಪ್ರಕರಣದಿಂದ ರಾಜ್ಯದ ಮಾನ ಹರಾಜಾಗಿದೆ. ದೇಶಾದ್ಯಂತ ಈ ಪ್ರಕರಣ ಸುದ್ದಿಯಾಗುತ್ತಿದೆ. ಅತ್ಯಾಚಾರ ಆರೋಪಿ ಪೃಜ್ವಲ್‌ನನ್ನು ಬಂಧಿಸಿ ರಾಜ್ಯದ ಗೌರವ ಕಾಪಾಡುವ ಬದಲು ಪೆನ್‌ಡ್ರೈವ್ ಬಹಿರಂಗಪಡಿಸಿದವರು ಯಾರು ಎಂಬ ಚರ್ಚೆಯಾಗುತ್ತಿರುವುದು ಹಾಸ್ಯಾಸ್ಪದ. ರಾಜಕೀಯ ಪ್ರಭಾವ ಬಳಸಿ ದೇಶದಿಂದ ಆರೋಪಿಗಳು ಪರಾರಿಯಾಗುವುದು ಇಲ್ಲಿ ಸಾಮಾನ್ಯವಾಗಿದೆ. ಇಂತಹ ಬೆಳವಣಿಗೆಗಳಿಗೆ ಅಂತ್ಯ ಹಾಡಬೇಕು.
ಎಷ್ಟೇ ಪ್ರತಿಷ್ಠಿತ ಕುಟುಂಬವಾದರೂ ಸರಿ, ಇಂತಹ ಅನಾಗರಿಕ ಹಗರಣದ ಆರೋಪಿಗಳನ್ನು ಯಾರೂ ಬೆಂಬಲಿಸಬಾರದು. ಕನ್ನಡ ನಾಡಿನ ಮಾನಕ್ಕೆ ಧಕ್ಕೆ ತಂದಿರುವ ಪ್ರಕರಣದಲ್ಲಿ ರಾಜಕೀಯವನ್ನು ಬದಿಗಿಟ್ಟು ಪ್ರಾಮಾಣಿಕವಾಗಿ ವರ್ತಿಸಿ, ಆರೋಪಿಗಳು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳದಂತೆ ಕ್ರಮ ಕೈಗೊಂಡು. ಸಂತ್ರಸ್ತರಿಗೆ ನ್ಯಾಯ ಒದಗಿಸಿ ಎಂದು ಅವರು ಹೇಳಿದ್ದಾರೆ.