ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿಯ ಬಹುಮುಖ ಪ್ರತಿಭೆಯ ಪ್ರತಿಭಾವಂತ ಬಾಲ ಕವಯತ್ರಿ, ನಗರದ ಕೆ.ಎಲ್.ಇ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಪ್ರಣತಿ ಆರ್.ಗಡಾದರನ್ನು ಡಿ. 20ರಂದು ಸುಕ್ಷೇತ್ರ ಬಳಗಾನೂರಿನಲ್ಲಿ ಜರುಗಲಿರುವ ಗದಗ ಜಿಲ್ಲಾ ಪ್ರಥಮ ಮಕ್ಕಳ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆ ಸರ್ವಾನುಮತದಿಂದ ಆಯ್ಕೆ ಮಾಡಿದೆ. ತನ್ನಿಮಿತ್ತ ಸಮ್ಮೇಳನದ ಸರ್ವಾಧ್ಯಕ್ಷರಿಗೆ ಅಧಿಕೃತ ಆಮಂತ್ರಣ ಕೊಡುವ ಕಾರ್ಯಕ್ರಮ ನಗರದ ಪ್ರಗತಿ ಗಡಾದರ ಮನೆಯಲ್ಲಿ ಜರುಗಿತು.
ಈ ಸಂದರ್ಭದಲ್ಲಿ ಜಿಲ್ಲಾ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷರಾದ ಪ್ರೊ. ಸುಧಾ ಹುಚ್ಚಣ್ಣವರ ಮಾತನಾಡಿ, ತನ್ನ 6ನೇ ವಯಸ್ಸಿನಲ್ಲಿಯೇ ಬರವಣಿಗೆಯನ್ನು ಪ್ರಾರಂಭಿಸಿ ಅನೇಕ ಶಿಶು ಪ್ರಾಸ, ಮಕ್ಕಳ ಕವಿತೆ, ಮಕ್ಕಳ ಕಥೆ, ಲೇಖನ, ಚುಟುಕು ವಚನಗಳನ್ನು ಬರೆದು ಅನೇಕ ಬಹುಮಾನ-ಪ್ರಶಸ್ತಿಗಳನ್ನು ಪಡೆದಿರುವ ಪ್ರಣತಿ ಗಡಾದ ಬಹುಮುಖ ಪ್ರತಿಭೆಯ ಬಾಲಕಿ. ವಿಶ್ವವಿಖ್ಯಾತ ಮೈಸೂರು ದಸರಾ ಕವಿಗೋಷ್ಠಿ, ಅಖಿಲ ಭಾರತ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ, ಕೇರಳ ರಾಜ್ಯ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ, ದೆಹಲಿಯಲ್ಲಿ ಜರುಗಿದ ಹೊರನಾಡ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನದ ವಿಚಾರಗೋಷ್ಠಿ ಸೇರಿದಂತೆ ಅನೇಕ ಪ್ರತಿಷ್ಠಿತ ಸಮ್ಮೇಳನಗಳಲ್ಲಿ ತನ್ನದೇ ಆದ ಪ್ರತಿಭೆಯಿಂದ ಗಮನ ಸೆಳೆದಿರುವ ಪ್ರಣತಿ ಆರ್.ಗಡಾದ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿ ಆಯ್ಕೆಯಾಗಿರುವುದು ನಿಜಕ್ಕೂ ಸಮ್ಮೇಳನದ ಘನತೆಯನ್ನು ಹೆಚ್ಚಿಸಿದೆ ಎಂದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೆ.ಎ. ಬಳಿಗೇರ ಎಲ್ಲ ಪದಾಧಿಕಾರಿಗಳೊಂದಿಗೆ ಪ್ರಣತಿಯವರಿಗೆ ಶಾಲು ಹೊದಿಸಿ ಸನ್ಮಾನಿಸಿ, ಆಮಂತ್ರಣ ಪತ್ರಿಕೆಯನ್ನು ಅಧಿಕೃತವಾಗಿ ಆಹ್ವಾನಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಬೂದಪ್ಪ ಅಂಗಡಿ, ಗದಗ ತಾಲೂಕಾ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಸುಲೋಚನಾ ಐಹೊಳೆ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ಡಿ.ಎಸ್. ಬಾಪುರೆ, ಪ್ರೊ. ಶಕುಂತಲಾ ಸಿಂಧೂರ್, ಬಿ.ಕೆ. ನಿಂಬನಗೌಡ್ರ, ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ರಾಜೇಂದ್ರ ಎಸ್.ಗಡಾದ, ಜ್ಯೋತಿ ಲೋಣಿ ಮುಂತಾದವರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆ.ಎ. ಬಳಿಗೇರ, ಮಕ್ಕಳ ಸಾಹಿತ್ಯ ಹಾಗೂ ಶರಣ ಸಾಹಿತ್ಯದಲ್ಲಿ ರಾಜ್ಯದಲ್ಲಿಯೇ ತನ್ನ ಪ್ರತಿಭೆಯ ಮೂಲಕ ಗುರುತಿಸಿಕೊಂಡಿರುವ ಕುಮಾರಿ ಪ್ರಣತಿ ಗಡಾದ ನಮ್ಮ ಜಿಲ್ಲೆಯ ಅಪರೂಪದ ಪ್ರತಿಭೆಯಾಗಿದ್ದು, ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನಿಂದ ನಡೆಯುತ್ತಿರುವ ಜಿಲ್ಲಾ ಪ್ರಥಮ ಮಕ್ಕಳ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿ ಆಯ್ಕೆಯಾಗಿರುವುದು ಗದಗ ಜಿಲ್ಲೆಗೆ ಸಂದ ದೊಡ್ಡ ಗೌರವವಾಗಿದೆ ಎಂದರು.



