ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಪಟ್ಟಣದ ಮೈಸೂರ ಮಠದಲ್ಲಿ ಗಜೇಂದ್ರಗಡ-ಉಣಚಗೇರಿ ವೀರಶೈವ ಲಿಂಗಾಯತ ಸಮಾಜದಿಂದ ಆಯೋಜಿಸಿರುವ ಗುಡ್ಡಾಪೂರ ದಾನಮ್ಮದೇವಿ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಸ್ಥಳೀಯ ಪುರಸಭೆ ವಿಪಕ್ಷ ನಾಯಕ ಮುರ್ತುಜಾ ಡಾಲಾಯತ್ ಕುಟುಂಬದವರು ಪ್ರಸಾದ ಭಕ್ತಿಸೇವೆ ಕೈಗೊಂಡಿದ್ದರು.
ಪ್ರತಿ ವರ್ಷದಂತೆ ನಡೆಯುವ ಶ್ರಾವಣ ಮಾಸದ ಪ್ರಯುಕ್ತ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಪ್ರತಿದಿನ ಭಕ್ತರೊಬ್ಬರು ಮಠದಲ್ಲಿ ಸಂಜೆ ಪುರಾಣ ಕಾರ್ಯಕ್ರಮದ ಬಳಿಕ ಪ್ರಸಾದ ಭಕ್ತಿ ಸೇವೆ ಮಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಡಾಲಾಯತ್ ಕುಟುಂಬದ ಪ್ರಸಾದ ಭಕ್ತಿಸೇವೆ ಮೆಚ್ಚುಗೆಗೆ ಪಾತ್ರವಾಯಿತು.
ಆಚರಣೆ ಮಾತ್ರ ಭಿನ್ನ, ಭಕ್ತಿ ಮಾತ್ರ ಒಂದು ಎನ್ನುವ ತತ್ವ ಪಾಲಿಸುತ್ತಿರುವ ಡಾಲಾಯತ್ ಕುಟುಂಬವು ಮೈಸೂರ ಮಠ ಸೇರಿ ಸುತ್ತಲಿನ ಗ್ರಾಮಗಳಲ್ಲಿ ನಡೆಯುವ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಪ್ರಸಾದದ ಭಕ್ತಿಸೇವೆ ವಹಿಸಿಕೊಂಡು ಧರ್ಮ ಮೀರಿ ಭಕ್ತಿ ತೋರಿರುವುದು ಮಾದರಿಯಾಗಿದೆ.
ಸಮಾಜದ ಅಧ್ಯಕ್ಷ ಸಿದ್ದಣ್ಣ ಬಂಡಿ ಮಾತನಾಡಿ, ಪುರಾಣ ಎಂಬುದು ಭಾವೈಕ್ಯತೆಯ ಕಾರ್ಯಕ್ರಮವಾಗಿದ್ದು, ಕಳೆದ ಕೆಲ ವರ್ಷಗಳಿಂದ ಮುಸ್ಲಿಂ ಕುಟುಂಬಗಳು ಮಠದಲ್ಲಿ ನಡೆಯುವ ಶಾವ್ರಣ ಮಾಸದ ಪುರಾಣ ಕಾರ್ಯಕ್ರಮ ವೇಳೆ ಪ್ರಸಾದ ಭಕ್ತಿಸೇವೆ ಮಾಡುವ ಮೂಲಕ ಸೌರ್ಹಾದತೆಗೆ ಸಾಕ್ಷಿಯಾಗುತ್ತಿದ್ದಾರೆ ಎಂದರು
ಮುರ್ತುಜಾ ಡಾಲಾಯತ್ ಮಾತನಾಡಿ, ಭಾವೈಕ್ಯತಾ ಪಟ್ಟಣವಾಗಿರುವ ಗಜೇಂದ್ರಗಡದಲ್ಲಿ ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ಕೂಡಿಕೊಂಡು ಜೀವನವನ್ನು ಸಾಗಿಸುತ್ತಿದ್ದೇವೆ ಎಂದರು.
ಮೈಸೂರ ಮಠದ ವಿಜಯಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಈ ವೇಳೆ ಎ.ಪಿ. ಗಾಣಗೇರ, ಶಿವು ಕೋರಧ್ಯಾನಮಠ, ಎಸ್.ಎಸ್. ವಾಲಿ, ಅಪ್ಪು ಮತ್ತಿಕಟ್ಟಿ, ಬಸವರಾಜ ಚನ್ನಿ,
ಮಲ್ಲಿಕಾರ್ಜುನ ಹಡಪದ ಸೇರಿ ಡಾಲಾಯತ್ ಕುಟುಂಬದ ಸದಸ್ಯರು, ಭಕ್ತಾಧಿಗಳು ಸೇರಿ ಇತರರು ಇದ್ದರು.