ವಿಜಯಸಾಕ್ಷಿ ಸುದ್ದಿ, ಗದಗ: ನಾಡಹಬ್ಬ ದಸರಾವು ಕಲೆ, ಸಂಸ್ಕೃತಿ ಮತ್ತು ಪರಂಪರೆಯ ಸಂಗಮಕ್ಕೆ ಸಾಕ್ಷಿಯಾಗಿದೆ. ಈ ವರ್ಷದ ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗದುಗಿನ ಪಂಡಿತ ಪುಟ್ಟರಾಜ ಗವಾಯಿಗಳ ಪರಮ ಶಿಷ್ಯರು, ಹಾಗೂ ಖ್ಯಾತ ತಬಲಾ ವಾದಕರಾದ ಪಂ. ಗುರುನಾಥ ಸುತಾರ ಇವರ ಪುತ್ರ ಪ್ರಸಾದ ಸುತಾರ ಇವರಿಗೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಹಾಡುವ ಅವಕಾಶ ಸಿಕ್ಕಿದ್ದು, ಗದುಗಿನ ಜನತೆಗೆ ಅತೀವ ಆನಂದ ಉಂಟುಮಾಡಿದೆ.
ಪ್ರಸಾದ ಸುತಾರ ತಮ್ಮ ಪ್ರಾರಂಭಿಕ ಸಂಗೀತ ವಿದ್ಯಾಭ್ಯಾಸವನ್ನು ನಗರದ ಪಂ. ಪುಟ್ಟರಾಜ ಗವಾಯಿಗಳ ಆಶ್ರಮದಲ್ಲಿ ಪಂ. ಕುಬೇರಪ್ಪ ನಡುವಿನಮನಿಯವರಲ್ಲಿ ಪ್ರಾರಂಭಿಸಿ ಸಧ್ಯ ಗೋಕರ್ಣದ ಪಂ. ಡಾ. ಹರೀಶ ಹೆಗಡೆಯವರ ಬಳಿ ಅಭ್ಯಾಸ ಮಾಡುತ್ತಿದ್ದಾರೆ. ಸಿವಿಲ್ ಇಂಜಿನಿಯರಿಂಗ್ ಪದವಿ ಹೊಂದಿದ ಇವರು ಕಳೆದ ನಾಲ್ಕು ವರ್ಷಗಳಿಂದ ಇನ್ಫೋಸಿಸ್ ಸಂಸ್ಥೆಯಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತ, ಸಂಗೀತವನ್ನೂ ಮೈಗೂಡಿಸಿಕೊಂಡಿದ್ದಾರೆ.
ಪ್ರಸಾದ ಸುತಾರ 2018ರಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಡೆಸುವ ಹಿಂದೂಸ್ತಾನಿ ಶಾಸ್ತ್ರೀಯ ಗಾಯನದಲ್ಲಿ ವಿದ್ವತ್, ಗದುಗಿನ ಪಿ.ಪಿ.ಜಿ ಸಂಗೀತ ವಿದ್ಯಾಲಯದಲ್ಲಿ ಒಎಸ್ಸಿ ಅಭ್ಯಾಸಿಸಿ ಕರ್ನಾಟಕ ಯುನಿವರ್ಸಿಟಿ ಧಾರವಾಡದಿಂದ ಬಂಗಾರ ಪದಕದೊಂದಿಗೆ 2ನೇ ರ್ಯಾಂಕ್ ಗಳಿಸಿದ್ದಾರೆ. 2024ರಲ್ಲಿ ಆಲ್ ಇಂಡಿಯಾ ರೇಡಿಯೊ ಆಕಾಶವಾಣಿ ಧಾರವಾಡದಿಂದ ಸುಗಮ ಸಂಗೀತದಲ್ಲಿ ಬಿ.ಗ್ರೇಡ್ ಮಾನ್ಯತೆ ಪಡೆದಿದ್ದಾರೆ.
2011ರಲ್ಲಿ ರಾಜ್ಯ ಕಲಾಶ್ರೀ ಪ್ರಶಸ್ತಿಯನ್ನು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ಪಡೆದಿದ್ದಾರೆ. ಬೆಳೆಯುತ್ತಿರುವ ಗದುಗಿನ ಈ ಕಲಾವಿದನಿಗೆ ಇನ್ನೂ ಹಚ್ಚಿನ ಪ್ರೋತ್ಸಾಹದ ಅವಶ್ಯಕತೆ ಇದೆ. ಸೆ. 24ರಂದು ಮೈಸೂರಿನ ಕರ್ನಾಟಕ ಕಲಾಮಂದಿರ ವೇದಿಕೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನೀಡುತ್ತಿದ್ದು, ಪ್ರಸಾದ ಸುತಾರ ಅವರಿಗೆ ಪಂ. ಪುಟ್ಟರಾಜರು ಹಾಗೂ ಗದುಗಿನ ಸರ್ವ ಸಂಗೀತಾಭಿಮಾನಿಗಳ ಪ್ರೋತ್ಸಾಹವಿರಲಿ.