ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ತಾಲೂಕಿನ ಹರದಗಟ್ಟಿ ತಾಂಡಾದಲ್ಲಿ ಗ್ರಾಮದ ಹಳೆಯ ವಿದ್ಯಾರ್ಥಿಗಳ ಸಂಘದಿಂದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಅದ್ದೂರಿಯಾಗಿ ನೆರವೇರಿತು.
ದಿವ್ಯ ಸಾನ್ನಿಧ್ಯ ವಹಿಸಿದ್ದ ಆದರಳ್ಳಿ ಗವಿಮಠದ ಮಹಾತಪಸ್ವಿ ಡಾ.ಕುಮಾರ ಮಹಾರಾಜರು ಆಶೀರ್ವಚನ ನೀಡಿ, ಮನುಷ್ಯ ಒಳ್ಳೆಯ ಸಂಸ್ಕಾರ ಬೆಳೆಸಿಕೊಳ್ಳಬೇಕು. ಸಂಸ್ಕಾರ ಇಲ್ಲದ ವ್ಯಕ್ತಿ ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ ಸಹ ಗೌರವ ದೊರೆಯಲಾರದು. ಅಂಕಗಳನ್ನು ಗಳಿಸುವದು ಮಹತ್ವವಲ್ಲ, ಸಂಸ್ಕಾರವು ಮುಖ್ಯ. ಸಂಸ್ಕಾರ ಇಲ್ಲದಿದ್ದರೆ ಅಡ್ಡದಾರಿ ಹಿಡಿಯುವ ಸಾಧ್ಯತೆಗಳಿರುತ್ತವೆ. ಈ ನಿಟ್ಟಿನಲ್ಲಿ ಮಕ್ಕಳನ್ನು ಒಳ್ಳೆಯ ಸಮಾಜ ಚಿಂತಕರನ್ನಾಗಿ ಉತ್ತಮ ದಾರಿಯಲ್ಲಿ ಸಾಗುವಂತೆ ಪ್ರೋತ್ಸಾಹ ನೀಡಿ ಎಂದು ನುಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ವಿದ್ಯಾರ್ಥಿಗಳು ವಿದ್ಯೆಯ ಜತೆಗೆ ಸಂಸ್ಕಾರ, ಶಿಸ್ತು ರೂಢಿಸಿಕೊಳ್ಳಬೇಕು. ತಂದೆ-ತಾಯಿ, ಗುರು-ಹಿರಿಯರನ್ನು ಗೌರವಿಸಬೇಕು. ಭಾರತೀಯ ಸಂಸ್ಕೃತಿಯನ್ನು ಬೆಳೆಸಿಕೊಂಡು ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸಿ ಉತ್ತಮ ವಾತಾವರಣ ಕಲ್ಪಿಸಿಕೊಟ್ಟರೆ ಪ್ರತಿಭೆ ವಿಕಸನಗೊಳ್ಳುತ್ತದೆ ಎಂದು ಹೇಳಿದರು.
ದಂತ ವೈದ್ಯ ಡಾ. ಎಲ್.ಪಿ. ನಾಯ್ಕ ಕಠಾರಿ ಉಪನ್ಯಾಸ ನೀಡಿದರು. ಪತ್ರಕರ್ತ ಕೃಷ್ಣ ಲಮಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಂತ ಸೇವಾಲಾಲ ಪ್ರಶಸ್ತಿ ಪುರಸ್ಕೃತ ರಮೇಶ ಲಮಾಣಿ, ಕರ್ನಾಟಕ ಸರ್ಕಾರದ ಉನ್ನತ ಪ್ರಶಸ್ತಿ, ಶ್ರೀ ಸಂತ ಸೇವಾಲಾಲ ಪ್ರಶಸ್ತಿ ಪುರಸ್ಕೃತ ಡಾ. ಎಲ್.ಪಿ. ನಾಯ್ಕ ಕಠಾರಿ ಅವರನ್ನು ಸನ್ಮಾನಿಸಲಾಯಿತು. ಎಸ್ಎಸ್ಎಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಪ್ರೇಮವ್ವ ನಾಯಕ, ಸದಸ್ಯರಾದ ಗಣೇಶ ನಾಯಕ, ಕವಿತಾ ಲಮಾಣಿ, ಲಕ್ಷೀ ಕಾರಬಾರಿ, ಸೋಮಕ್ಕ ತಳವಾರ, ಪುರಪ್ಪ ರಜಪೂತ, ರಾಮಪ್ಪ ಲಮಾಣಿ, ಲಕ್ಷ್ಮಣ ಲಮಾಣಿ, ಥಾವರಪ್ಪ ಲಮಾಣಿ, ಸೋಮಲಪ್ಪ ನಾಯಕ, ಜೀವಪ್ಪ ಡಾವ, ಕೃಷ್ಣ ಕಾರಭಾರಿ, ಮಹಾದೇವ ಅಂಗಡಿ, ರವಿ ಲಮಾಣಿ, ಶಿವಪ್ಪ ನಾಯಕ, ಚಂದ್ರು ಬಡಗೇರ, ಸುರೇಶ ಲಮಾಣಿ, ಶಂಕರ ಕಾರಭಾರಿ, ರಮೇಶ ಲಮಾಣಿ, ಲಕ್ಷ್ಮಣ ಪೂಜಾರ ಇದ್ದರು. ಪರಮೇಶ ಲಮಾಣಿ ಸ್ವಾಗತಿಸಿದರು. ಸಂತೋಷ ರಾಠೋಡ, ರಾಜು ನಾಯಕ ನಿರೂಪಿಸಿದರು.
ಮಾಜಿ ಶಾಸಕ ರಾಮಣ್ಣ ಲಮಾಣಿ ಮಾತನಾಡಿ, ಇಂದು ಮಕ್ಕಳು ವಿದ್ಯೆಯಲ್ಲಿ ಸಾಕಷ್ಟು ಪ್ರಗತಿ ಹೊಂದುತ್ತಿದ್ದರೂ ಸಹ ಅವರಿಗೆ ಸಮಾಜಮುಖಿ ಚಿಂತನೆಗಳನ್ನು ಹೇಳಿಕೊಡುವದರ ಜೊತೆ ಉತ್ತಮ ಸಂಸ್ಕಾರವಂತರನ್ನಾಗಿ ಬೆಳೆಸಬೇಕು ಎಂದು ಹೇಳಿದರು.