ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಕಳೆದ ನಾಲ್ಕೈದು ವರ್ಷಗಳಿಂದ ಮುಂಗಾರು ಮಳೆ ರೈತರೊಂದಿಗೆ ಚೆಲ್ಲಾಟ ಆಡುತ್ತಾ ಬರುತ್ತಿದೆ. ಪ್ರಾರಂಭದಲ್ಲಿ ಪೂರ್ವ ಮುಂಗಾರು ಆರ್ಭಟ ಜೋರಾಗಿರುತ್ತದೆ. ಇದನ್ನು ನಂಬಿದ ರೈತ ಸಮುದಾಯ ಸಾವಿರಾರು ರೂ ಖರ್ಚ ಮಾಡಿ, ಬೀಜ, ಗೊಬ್ಬರ, ಟ್ರ್ಯಾಕ್ಟರ್ ಬಾಡಿಕೆ, ಎತ್ತಿನ ಬಾಡಿಗೆ, ಕೃಷಿ ಕಾರ್ಮಿಕರ ಕೂಲಿ ಹೀಗೆ ಹಲವು ರೀತಿಯಲ್ಲಿ ಹಣ ಖರ್ಚು ಮಾಡಿ ಬಿತ್ತನೆಗೆ ಮುಂದಾಗುತ್ತಾರೆ. ಆದರೆ, ಆರಂಭದಲ್ಲಿ ಹರ್ಷಗೊಳ್ಳಿಸಿದ ಮುಂಗಾರು, ಬಿತ್ತನೆ ನಂತರ ಮುನಿಸಿಕೊಂಡು ರೈತರಲ್ಲಿ ನಿರಾಸೆ ಮೂಡಿಸುತ್ತಿದೆ.
ಇದೀಗ, ಮಳೆಗಾಗಿ ಪ್ರಾರ್ಥಿಸಿ ರೈತರು ವಿವಿಧ ದೇವರುಗಳ ಮೊರೆ ಹೋಗುತ್ತಿದ್ದಾರೆ. ಗುರ್ಜಿ ಆಟ, ಹಳ್ಳ ಪೂಜೆ, ಬನ್ನಿ ಮಹಾಕಾಳಿಕಾದೇವಿ ಪೂಜೆ, ಅಭಿಷೇಕ, ಕಪ್ಪೆ ಮದುವೆ, ಕೆರೆ ಪೂಜೆ, ದೀಡ್ ನಮಸ್ಕರ, ಉಪವಾಸ ಸೇರಿದಂತೆ ಹಲವು ರೀತಿಯಲ್ಲಿ ಮಳೆರಾಯನನ್ನು ಕರೆಯತೊಡಗಿದ್ದಾರೆ.
ಮುತ್ತೈದೆಯರು ಮಡಿಯಿಂದ ಬನ್ನಿ ಮಹಾಂಕಾಳಿದೇವಿ ಆವರಣವನ್ನು ಸ್ವಚ್ಛಗೊಳಿಸಿ, ಸೆಗಣಿ ಸಾರಿಸಿ, ಜೋಳವನ್ನು ಸುರಿದು ಅದರ ಮೇಲೆ ನೀರು ತುಂಬಿದ ತಾಮ್ರದ ಕೊಡಕ್ಕೆ ಮಲ್ಲಿಗೆ ಹೂ ಮುಡಿಸಿ, ಗ್ರಾಮದ ದೇವರು ಹೊತ್ತ ಮಹಿಳೆಯೊಂದಿಗೆ ಕೊಡವನ್ನು ತಿರುಗಿಸುತ್ತಾರೆ. ಕೊಡವು ಸರಳವಾಗಿ ತಿರುಗಲು ಪ್ರಾರಂಭಿಸಿದರೆ ಮತ್ತು ಅದು ಉರುಳಿ ಬಿದ್ದರೆ ಮಳೆಯಾಗುತ್ತದೆ ಎಂದರ್ಥ. ಒಂದು ವೇಳೆ ತುಂಬಿದ ಕೊಡವು ಬಿಗಿಯಾಗಿ ಸುತ್ತದಿದ್ದರೆ ಮಳೆ ಬರುವುದು ಕಷ್ಟ ಎಂಬ ನಂಬಿಕೆ ಕೂಡ ಚಾಲ್ತಿಯಲ್ಲಿದೆ.
ಗ್ರಾಮದ ಚಿಕ್ಕ ಮಕ್ಕಳು ಮೈತುಂಬಾ ರೊಟ್ಟಿ ಹಂಚಿನ ಕಾಡಿಗೆಯನ್ನು ಹಚ್ಚಿಕೊಂಡು ತಲೆಯ ಮೇಲೆ ರೊಟ್ಟಿ ಹಂಚು ಹಾಕಿಕೊಂಡು ಅದಕ್ಕೆ ಸೆಗಣಿ ಉತ್ರಾಣಿ ಪತ್ರಿ, ಗಿಡದ ಕಡ್ಡಿಗಳನ್ನು ಇಟ್ಟುಕೊಂಡು ಮಳೆಗಾಗಿ ಪ್ರಾರ್ಥನೆ ಮಾಡುತ್ತಾ ಮನೆ ಮನೆಗೆ ತೆರಳಿ ಮೈಮೇಲೆ ನೀರು ಸುರಿಸಿಕೊಳ್ಳುವದು ಗುರ್ಜಿ ಆಟ. ಅದಕ್ಕೆ ರೈತ ಮಹಿಳೆಯರು ಉದ್ದಿನ ಕಡ್ಡಿಯಿಂದ ಪೂಜೆ ಮಾಡಿ ತಮ್ಮಲ್ಲಿರುವ ಜೋಳ, ಅಕ್ಕಿ, ಗೋಧಿಯನ್ನು ದಾನ ಮಾಡುತ್ತಾರೆ. ತಾವು ಸಂಗ್ರಹಿಸಿದ ಧಾನ್ಯಗಳನ್ನು ಒಂದಡೆ ಸಂಗ್ರಹ ಮಾಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಅನ್ನ ಸಂತರ್ಪಣೆ ಹಮ್ಮಿಕೊಳ್ಳುವ ಪದ್ಧತಿ ಚಾಲ್ತಿಯಲ್ಲಿದೆ.
ಮುಂಗಾರು ಮಳೆ ಆಗಮನಕ್ಕೆ ಮಹಿಳೆಯರು ಮತ್ತು ರೈತರು, ಚಿಕ್ಕ ಮಕ್ಕಳು ಸಂಪ್ರದಾಯದಂತೆ ಹಳ್ಳಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸುತ್ತಿದ್ದಾರೆ. ಕೊಳ್ಳುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ರೈತ ಸಮುದಾಯ ಮಳೆಗಾಗಿ ತಾವು ಬೆಳೆದ ಅಲ್ಪಸ್ವಲ್ಪ ಕಾಳು-ಕಡಿಗಳನ್ನು ಸಂಗ್ರಹಣೆ ಮಾಡಿ, ಜೋಳದ ಸಂಗಟಿ, ಸಾರು ಮಾಡಿ ಎಲ್ಲರೂ ಪ್ರಸಾದವನ್ನು ಸ್ವೀಕರಿಸುವ ಪದ್ಧತಿಯೂ ನಡೆಯುತ್ತಿದೆ.
ಮುಂಗಾರು ಮಳೆ ಆಗದಿದ್ದರೆ ಸಾಲ-ಸೋಲ ಮಾಡಿ ಬಿತ್ತನೆ ಬೀಜ, ಗೊಬ್ಬರ, ಕೂಲಿ ಖರ್ಚು ಮಾಡಿರುತ್ತಾರೆ. ಮುಂಗಾರು ಕೈಕೊಟ್ಟರೆ ಕಂಗಾಲಾಗಿ ಊರು ಬಿಡುವ ಪ್ರಸಂಗ ಕೂಡ ಎದುರಾಗುತ್ತಿದೆ. ಹೀಗಾಗಿ ನಾವು ಮಳೆಗಾಗಿ ಹಲವು ರೀತಿಯಲ್ಲಿ ಪೂಜೆಗಳನ್ನು ಸಲ್ಲಿಸುವ ಮೂಲಕ ಮುನಿಸಿಕೊಂಡ ಮಳೆರಾಯನಿಗೆ ಪ್ರಾರ್ಥನೆ ಮಾಡುತ್ತೇವೆ ಎಂದು ಅಬ್ಬಿಗೇರಿ ಗ್ರಾಮದ ರೈತರಾದ ಶೇಖಪ್ಪ ಬಿಲ್ಲರ, ಪರ್ವತಗೌಡ ಪಾಟೀಲ, ದೇವಪ್ಪ ಬಿಲ್ಲರ, ವಿರೂಪಾಕ್ಷಗೌಡ ಪಾಟೀಲ ಹೇಳಿದರು.
ಮುಂಗಾರು ಮಳೆಗಾಗಿ ಪ್ರಾರ್ಥಿಸಿ ಪ್ರಸಕ್ತ ವರ್ಷ ಎರಡು ಕ್ವಿಂಟಲ್ ಸಂಗಟಿ, 1 ಕ್ವಿಂಟಲ್ ಸಿರಾ ಮತ್ತು ಸಾರು ಮಾಡಿ ಪ್ರಸಾದ ಸೇವೆ ಹಮ್ಮಿಕೊಳ್ಳಲಾಗಿದೆ. ನಮ್ಮ ಪ್ರಾರ್ಥನೆಯನ್ನು ಆಲಿಸಿ ವರುಣ ದೇವ ಕೃಪೆದೋರಲೆಂದು ರೈತರಾದ ನಾವೆಲ್ಲರೂ ಬೇಡಿಕೊಳ್ಳುತ್ತಿದ್ದೇವೆ ಎಂದು ಬಾಬುಗೌಡ ಪಾಟೀಲ, ಹನಮಪ್ಪ ಬೇಲೇರಿ, ಜಯಪ್ಪ ಹುಲ್ಲೂರ, ಶರಣಯ್ಯ ಅರಳಲಿಮಠ, ಕಳಕಪ್ಪ ಬಿಲ್ಲ ಮುಂತಾದವರು ತಿಳಿಸಿದರು.