ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಉತ್ತಮ ಮಳೆಯಾಗಿ ರೈತರ ಬದುಕು ಹಸನಾಗಲಿ, ಬೆಳೆಗಳು ಸಮೃದ್ಧಿಯಾಗಿ ಬೆಳೆಯಲಿ ಹಾಗೂ ಗ್ರಾಮದಲ್ಲಿ ಸುಖ-ಶಾಂತಿ ನೆಲೆಸಲಿ ಎಂಬ ಆಶಯದೊಂದಿಗೆ ತಾಲೂಕಿನ ಹಂಪಾಪಟ್ಟಣದಲ್ಲಿ ಹಾಲುಮತ ಸಮಾಜದ ವತಿಯಿಂದ ಸಾಂಪ್ರದಾಯಿಕ ಕಂಬಳಿ ಬೀಸುವ ಆಚರಣೆ ಭಕ್ತಿಭಾವದಿಂದ ನೆರವೇರಿತು.
ಗ್ರಾಮದ ಪಾರಂಪರಿಕ ಸಂಪ್ರದಾಯದಂತೆ ಮೂರು ದಿನಗಳ ಕಾಲ ನಡೆದ ಗುರ್ಜಿ ಆಚರಣೆಯ ಸಮಾರೋಪದ ಅಂಗವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಳೆಯ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕದಿರಲಿ ಹಾಗೂ ಕೃಷಿ ಚಟುವಟಿಕೆಗಳು ಯಶಸ್ವಿಯಾಗಿ ಸಾಗಲಿ ಎಂಬ ಉದ್ದೇಶದಿಂದ ಗ್ರಾಮಸ್ಥರು ಮಳೆರಾಯನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಹಾಲುಮತ ಸಮಾಜದ ಮುಖಂಡರು ಹಾಗೂ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸಿದ ಬಳಿಕ, ಸಮಾಜದ ಹಿರಿಯರಾದ ರಂಗಪ್ಪ ಅವರು ಸಂಪ್ರದಾಯಬದ್ಧವಾಗಿ ಕಂಬಳಿ ಬೀಸುವ ಮೂಲಕ ಉತ್ತಮ ಮಳೆಯಾಗುವಂತೆ ಪ್ರಾರ್ಥಿಸಿದರು. ಈ ವೇಳೆ ರೈತರು ಹಾಗೂ ಗ್ರಾಮಸ್ಥರು ಬೆಳೆ ಸಮೃದ್ಧಿ ಮತ್ತು ಗ್ರಾಮ ಕಲ್ಯಾಣಕ್ಕಾಗಿ ಮೊರೆ ಇಟ್ಟರು.
ಹಾಲುಮತ ಸಮುದಾಯದಲ್ಲಿ ಕಂಬಳಿ ಬೀಸುವ ಆಚರಣೆಗೆ ವಿಶೇಷ ಮಹತ್ವವಿದ್ದು, ಇದು ತಲೆಮಾರುಗಳಿಂದ ನಡೆದುಕೊಂಡು ಬಂದಿರುವ ಜನಪದ ಸಂಪ್ರದಾಯವಾಗಿದೆ. ಪ್ರಕೃತಿಯೊಂದಿಗೆ ಬೆಸೆದುಕೊಂಡಿರುವ ರೈತ ಸಮುದಾಯದ ನಂಬಿಕೆ, ಭಕ್ತಿ ಹಾಗೂ ಕೃಷಿ ಸಂಸ್ಕೃತಿಯ ಪ್ರತೀಕವಾಗಿ ಈ ಆಚರಣೆ ಇಂದಿಗೂ ಜೀವಂತವಾಗಿದೆ.
ಬಳಿಕ ಗ್ರಾಮದ ದೇವರುಗಳ ಪ್ರದಕ್ಷಿಣೆ ನಡೆಸಿ, ಊರಿನ ಹೊರವಲಯದಲ್ಲಿರುವ ಬನ್ನಿ ಮರದ ಬಳಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಭಕ್ತರಿಗೆ ಕೇಸರಿ ಬಾತ್ ಹಾಗೂ ಉಪ್ಪಿಟ್ಟು ಪ್ರಸಾದ ವಿತರಿಸಲಾಯಿತು.
ಮಹಿಳೆಯರು ಜನಪದ ಗೀತೆಗಳನ್ನು ಹಾಡುವ ಮೂಲಕ ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು. ವಿಶೇಷವಾಗಿ “ಗುರ್ಜಿ ಗುರ್ಜಿ ಎಲ್ಲಿಂದ ಬಂದೆ, ಮಳೆರಾಯನ ಸಂದೇಶ ತಂದೆ” ಎಂಬ ಜನಪದ ಗೀತೆ ಎಲ್ಲರ ಗಮನ ಸೆಳೆಯಿತು.
ಈ ಸಂದರ್ಭದಲ್ಲಿ ಬಿನಾಗರಾಜ್, ಕನಕಪ್ಪ ಉಪ್ಪಾರ್, ರಂಗಪ್ಪ, ಬಸಪ್ಪ, ರಮೇಶ್, ಕರಕಟ್ಟಿ ನಾಗರಾಜ್, ಹುಲಿಗೆಮ್ಮ ಉಪ್ಪಾರ್, ಬಸವರಾಜ್ ಬಳಿಗಾರ, ಸಿ. ಸೋಮನಾಥ್, ಎಸ್. ಬಸವರಾಜ್, ಶರಣ್, ಶರಣಬಸನಗೌಡ, ಟಿ. ಕೊಟ್ರೇಶ್, ಎನ್ನ ನಾಗರಾಜ, ಪತ್ರಿ ಎಲ್ಲಪ್ಪ, ಟಿ. ಗೌತಮ್, ಉಪ್ಪರಂಗಪ್ಪ, ಸಣ್ಣಪ್ಪ ನಾಗರಾಜ, ಉಪ್ಪಾರ್ ಕೊಟ್ರೇಶ್, ಎಂ. ಕೊಟ್ರೇಶ್, ಮಾರ್ಗೇಶ್ ಸೇರಿದಂತೆ ಅನೇಕ ಗ್ರಾಮಸ್ಥರು ಭಾಗವಹಿಸಿದ್ದರು.
ಪೂರ್ವಜರ ಪರಂಪರೆ
“ಕಂಬಳಿ ಬೀಸುವ ಆಚರಣೆ ಕೇವಲ ಸಂಪ್ರದಾಯವಲ್ಲ; ಉತ್ತಮ ಮಳೆ, ಸಮೃದ್ಧ ಬೆಳೆ ಮತ್ತು ರೈತರ ಸುಖಜೀವನಕ್ಕಾಗಿ ನಮ್ಮ ಪೂರ್ವಜರು ರೂಪಿಸಿದ ನಂಬಿಕೆಯ ಸಂಕೇತವಾಗಿದೆ.”
– ಹಾಲುಮತ ಸಮಾಜದ ಮುಖಂಡರು



