ವಿಜಯಸಾಕ್ಷಿ ಸುದ್ದಿ, ಗದಗ : ಮುಸ್ಲಿಂ ಧರ್ಮದ ಪ್ರವಾದಿಗಳಾದ ಹಜರತ್ ಮುಹಮ್ಮದ ಪೈಗಂಬರ್ ಅವರ ಜಯಂತಿಯನ್ನು ಸೆ.16ರಂದು ಬೆಳಿಗ್ಗೆ 10.30ಕ್ಕೆ ನಗರದ ಸರಕಾರಿ ಉರ್ದು ಬಾಲಕಿಯರ ಪ್ರೌಢಶಾಲೆಯಲ್ಲಿ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಗದಗ-ಬೆಟಗೇರಿ ಈದ್ ಮಿಲಾದ ಕಮಿಟಿಯ ಅಧ್ಯಕ್ಷ ಬಾಷಾಸಾಬ ಮಲ್ಲಸಮುದ್ರ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಪ್ರವಾದಿ ಮುಹಮ್ಮದ ಪೈಗಂಬರ್ ಅವರ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, ಜಯಂತಿ ಅಂಗವಾಗಿ ರಕ್ತದಾನ ಶಿಬಿರ, ಉಚಿತ ನೇತ್ರ ತಪಾಸಣೆ, ಗದಗ-ಬೆಟಗೇರಿ ಅವಳಿ ನಗರದ ಮಸ್ಜೀದಿಯ ಮುತವಲ್ಲಿಗಳಿಗೆ ಸನ್ಮಾನ, ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ವಿತರಣೆ, ಸಾಧಕರಿಗೆ ಸನ್ಮಾನ, ಅನ್ನಸಂತರ್ಪಣೆ ಸೇರಿದಂತೆ ಹತ್ತು ಹಲವಾರು ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ಜಯಂತಿ ಸಮಾರಂಭದಲ್ಲಿ ಧಾರ್ಮಿಕ ಗುರುಗಳು, ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ್ ಭಾಗವಹಿಸಲಿದ್ದಾರೆ ಎಂದರು.
ಕಮಿಟಿಯ ಕೋಶಾಧ್ಯಕ್ಷರಾದ ಕರೀಮಸಾಬ ಸುಣಗಾರ ಮಾತನಾಡಿ, ಕ್ರಿ.ಶ 6ನೇ ಶತಮಾನದಲ್ಲಿ ಅರೇಬಿಯಾದ ಮೆಕ್ಕಾದಲ್ಲಿ ಜನಿಸಿದ ಪ್ರವಾದಿ ಮುಹಮ್ಮದ ಪೈಗಂಬರರು ಅಂದಿನ ಮೌಢ್ಯಗಳ ವಿರುದ್ಧ ದನಿ ಎತ್ತಿದರು. ಅವರ ಜಯಂತಿಯನ್ನು ಎಲ್ಲರೂ ಒಟ್ಟಾಗಿ ಆಚರಿಸೋಣ. ಅವರ ಆದರ್ಶ ಮೌಲ್ಯಗಳನ್ನು ಪಸರಿಸುವ ಕಾರ್ಯವೂ ನಿರಂತರವಾಗಿ ನಡೆಯಬೇಕಿದೆ ಎಂದರು.
ಸಭೆಯಲ್ಲಿ ಕಮಿಟಿಯ ಉಪಾಧ್ಯಕ್ಷ ಅಬ್ದುಲ್ ರೆಹಮಾನ ರಾಟಿ, ಜಹಾಂಗೀರ್ ಮುಳಗುಂದ, ಮುದಮಿಲ್ ಬಳ್ಳಾರಿ, ಚಾಂದಸಾಬ ಕೊಟ್ಟೂರ, ಆರೀಪ ಮುಳಗುಂದ, ಯೂಸುಪಸಾಬ ಕೊಟ್ಟೂರ, ಅಲ್ತಾಪ ಇಲಕಲ್, ಇಸುಪ ಶಿರವಾರ, ರಿಯಾಜ ಡಾಲಾಯತ ಸೇರಿದಂತೆ ಹಲವರಿದ್ದರು.