ವಿಜಯಸಾಕ್ಷಿ ಸುದ್ದಿ, ಗದಗ : ಮುಂಗಾರು ಮಳೆ ಪೂರ್ವ ಸಿದ್ಧತೆ ಹಿನ್ನೆಲೆಯಲ್ಲಿ ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯಲ್ಲಿನ ಮಳೆ ನೀರು ಚರಂಡಿಗಳ ಮತ್ತು ರಾಜಕಾಲುವೆಗಳಲ್ಲಿ ಹೂಳು ತುಂಬಿದ್ದು, ಹೂಳು ತೆಗೆಯಲು ಮತ್ತು ಮುಳ್ಳು ಕಂಟಿಗಳನ್ನು ತೆಗೆದು ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುತ್ತಿದೆ.
ಸದರಿ ಸ್ವಚ್ಛತಾ ಕಾಮಗಾರಿಯನ್ನು ಶನಿವಾರ ಬೆಳಿಗ್ಗೆ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಸ್ಥಳ ಪರಿಶೀಲನೆ ಮಾಡಿ ಸೂಕ್ತ ಸಲಹೆ-ಸೂಚನೆಗಳನ್ನು ನೀಡಿದರು. ಹಿಟಾಚಿ ಮತ್ತು ಜಿಸಿಬಿ ವಾಹನಗಳ ಮುಖಾಂತರ ಶೀಘ್ರವಾಗಿ ರಾಜಕಾಲುವೆ ಸ್ವಚ್ಛಗೊಳಿಸಲು ಕ್ರಮ ಜರುಗಿಸಬೇಕು. ಮಳೆ ನೀರು ಸರಾಗವಾಗಿ ಚರಂಡಿ ಹಾಗೂ ರಾಜಕಾಲುವೆ ಮೂಲಕ ಸಾಗಲು ಅನುವು ಮಾಡಿಕೊಡಬೇಕೆಂದು ಸೂಚನೆ ನೀಡಿದರು.
ದೊಡ್ಡ ಮಳೆ ಸುರಿದಾಗ ಮಳೆ ನೀರು ಹರಿಯುವ ಚರಂಡಿಗಳಲ್ಲಿ ಸಾರ್ವಜನಿಕರು ಕಸ ಹಾಗೂ ಕಟ್ಟಡದ ಭಗ್ನಾವಶೇಷಗಳನ್ನು ಎಸೆಯದಂತೆ ನೋಡಿಕೊಳ್ಳಬೇಕು. ಸಮರ್ಪಕವಾಗಿ ತ್ಯಾಜ್ಯ ವಸ್ತುಗಳ ವಿಲೇವಾರಿ ಮಾಡಲು ಸೂಚಿಸಿದರು. ನಂತರ ಗದಗ-ಬೆಟಗೇರಿ ನಗರದಲ್ಲಿ ಸಂಚರಿಸಿ, ಮಾನ್ವಿ ರಾಜನಾಲಾ, ಹೊಸ ಕೋರ್ಟ್ ಹತ್ತಿರದ ರಾಜನಾಲಾ, ಬೆಟಗೇರಿ ಭಾಗದಲ್ಲಿ ಬರುವ ಜರ್ಮನ್ ಹಾಸ್ಪಿಟಲ್ ಹತ್ತಿರದ ರಾಜನಾಲಾ ಮತ್ತು ಹುಯಿಲಗೋಳ ಬ್ರಿಡ್ಜ್ ಹತ್ತಿರದ ರಾಜನಾಲಾ ಸ್ಥಳ ಪರಿಶೀಲನೆ ಮಾಡಿದರು.
ಈ ಸಂದರ್ಭದಲ್ಲಿ ನಗರಸಭೆಯ ಸಹಾಯಕ ಕಾರ್ಯಪಾಲಕ ಪರಿಸರ ಅಭಿಯಂತರ ಆನಂದ ಬದಿ, ನಗರಸಭೆಯ ಆರೋಗ್ಯ ನಿರೀಕ್ಷಕರು, ದಫೇದಾರರು ಹಾಜರಿದ್ದರು.