ವಿಜಯಸಾಕ್ಷಿ ಸುದ್ದಿ, ಮುಳಗುಂದ : ರಾಜ್ಯಾದ್ಯಂತ ಡೆಂಘೀ ಅಬ್ಬರ ಜೋರಾಗಿದ್ದು, ಜಿಲ್ಲೆಯಲ್ಲೂ ಸೊಂಕಿನ ಶಂಕಿತರ ಸಂಖ್ಯೆ ಹೆಚ್ಚಿದೆ. ಪಟ್ಟಣದಲ್ಲಿ ಡೆಂಘಿ ನಿಯಂತ್ರಣ ಮುಂಜಾಗ್ರತಾ ಕ್ರಮವಾಗಿ ಪ.ಪಂ ಮುಖ್ಯಾಧಿಕಾರಿ ಮಂಜುನಾಥ ಗುಳೇದ ಅವರ ಸೂಚನೆಯ ಮೇರೆಗೆ ಪೌರ ಕಾರ್ಮಿಕರು ಸ್ಥಳೀಯ ವಿವಿಧ ವಾರ್ಡ್ಗಳಲ್ಲಿ, ಶಾಲೆಗಳಲ್ಲಿ ಮಿಲಾಥಿಯನ್ ಆಯಿಲ್ ಹಾಗೂ ಪೌಡರ್‌ನ್ನು ಸಿಂಪರಣಾ ಕಾರ್ಯ ಕೈಗೊಂಡರು.
ಡೆಂಗ್ಯೂ ನಿಯಂತ್ರಣಕ್ಕಾಗಿ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಬೇಕು. ಚರಂಡಿಗಳಲ್ಲಿ ಕಸಕಡ್ಡಿಗಳನ್ನು ಎಸೆಯದೇ ನೀರು ಸರಾಗವಾಗಿ ಹರಿಯುವಂತೆ ನೋಡಿಕೊಳ್ಳಬೇಕು. ಮನೆಯಲ್ಲಿರುವ ನೀರು ಸಂಗ್ರಹಣಾ ಪಾತ್ರೆಗಳು ಮತ್ತು ಡ್ರಮ್‌ಗಳನ್ನು ಸರಿಯಾದ ಮುಚ್ಚಳದಿಂದ ಮುಚ್ಚಬೇಕು. ಮನೆಯ ಸುತ್ತಮುತ್ತ ಒಡೆದ ಡಬ್ಬ, ಟೈರು, ಎಳೆನೀರಿನ ಚಿಪ್ಪು ಮುಂತಾದ ಮಳೆ ನೀರು ಸಂಗ್ರಹಣೆಗೆ ಅವಕಾಶವಾಗುವ ಯಾವುದೇ ವಸ್ತುಗಳನ್ನು ಎಸೆಯಬಾರದು. ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಪಾಲಕರು ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಸಾರ್ವಜನಿಕರಲ್ಲಿ ಜಾಗ್ರತಿ ಮೂಡಿಸಿದರು.
ಈ ವೇಳೆ ಪೌರಕಾರ್ಮಿಕರು ಸೇರಿದಂತೆ ಪ.ಪಂ ಸಿಬ್ಬಂದಿ ವರ್ಗದವರು ಇದ್ದರು.