ವಿಜಯಸಾಕ್ಷಿ ಸುದ್ದಿ, ಗದಗ : ಕಾಲರಾ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನೀಲಗುಂದ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಕಾಲರಾವು ವಿಬ್ರಿಯೋ ಕಾಲರಾ ಎಂಬ ಬ್ಯಾಕ್ಟ್ಟೀರಿಯಾದಿಂದ ಹರಡುವ ಕಾಯಿಲೆಯಾಗಿದ್ದು, ಈ ಬ್ಯಾಕ್ಟೀರಿಯಾ ಕಲುಷಿತ ನೀರನ್ನು ಕುಡಿಯುವುದರಿಂದ ಮತ್ತು ಕಲುಷಿತ ಆಹಾರ ಸೇವಿಸುವುದರ ಮುಖಾಂತರ ಪ್ರಸರಣವಾಗುತ್ತದೆ. ಇದರಿಂದ ಅತಿಸಾರ, ವಾಕರಿಕೆ, ವಾಂತಿ, ನಿರ್ಜಲೀಕರಣ ಮತ್ತು ಸ್ನಾಯು ಸೆಳೆತದಂತಹ ಸಮಸ್ಯೆಗಳು ಉದ್ಭವಿಸುತ್ತವೆ. ಸಾರ್ವಜನಿಕರು ಕಾಲರಾ ರೋಗ ಹರಡದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವಂತೆ ಕೋರಿದ್ದಾರೆ.
ಮಾಡಬೇಕಾಗಿರುವುದು: ಕುದಿಸಿ ಆರಿಸಿದ ನೀರನ್ನು ಕುಡಿಯುವುದು. ಸಾರ್ವಜನಿಕರು ನೀರಿನ ಕೊಳಾಯಿ ಮತ್ತು ಸ್ಥಳವನ್ನು ಸ್ವಚ್ಛವಾಗಿ ಇಡುವುದು. ತಾಜಾ ಹಣ್ಣುಗಳು, ತರಕಾರಿಗಳನ್ನು ಮತ್ತು ಆಹಾರ ಪದಾರ್ಥಗಳನ್ನೇ ಉಪಯೋಗಿಸುವುದು. ಊಟ ತಯಾರಿಸುವ ಮತ್ತು ಊಟ ಮಾಡುವ ಮುನ್ನ ಕೈಗಳನ್ನು ಸಾಬೂನು ಮತ್ತು ನೀರಿನಿಂದ ಸ್ವಚ್ಛಗೊಳಿಸುವುದು. ಶೌಚಾಲಯವನ್ನು ಉಪಯೋಗಿಸುವ ಮುಂಚೆ ಮತ್ತು ನಂತರ ಕೈಗಳನ್ನು ಸಾಬೂನಿನಿಂದ ಸ್ವಚ್ಛಗೊಳಿಸುವುದು. ಸಿದ್ಧಪಡಿಸಿದ ಆಹಾರ ಪದಾರ್ಥಗಳ ಮೇಲೆ ಕ್ರಿಮಿ-ಕೀಟಗಳು ಕುಳಿತುಕೊಳ್ಳದಂತೆ ಸದಾ ಮುಚ್ಚಳದಿಂದ ಮುಚ್ಚಿಡುವುದು. ನಿಮ್ಮ ಮನೆ ಮತ್ತು ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಡುವುದು. ಚಹಾ ಅಂಗಡಿಗಳಲ್ಲಿ ಶುದ್ಧ ಕುಡಿಯುವ ನೀರನ್ನೇ ಉಪಯೋಗಿಸುವುದು ಹಾಗೂ ಸ್ವಚ್ಛತೆಯನ್ನು ಕಾಪಾಡುವುದು.
ಮಾಡಬಾರದ್ದು: ಸೋರಿಕೆ ಇರುವ ಕೊಳಾಯಿ ನೀರನ್ನು ಕುಡಿಯಬಾರದು. ಪಾದಚಾರಿ ರಸ್ತೆಗಳಲ್ಲಿ, ರಸ್ತೆ ಬದಿಗಳಲ್ಲಿ ಮಾರಾಟ ಮಾಡುವ ತಿನಿಸುಗಳು ಹಾಗೂ ತಳ್ಳು ಗಾಡಿಗಳಲ್ಲಿ ಮಾರುವ, ಕತ್ತರಿಸಿದ ಹಣ್ಣು, ಪದಾರ್ಥಗಳನ್ನು ತಿನ್ನಬಾರದು. ಧೂಳು, ನೊಣ, ಜಿರಳೆಗಳು ಇತರೇ ಕೀಟಗಳು ಮುತ್ತುವಂತೆ ತೆರೆದಿಟ್ಟಿರುವ ಆಹಾರ ಪದಾರ್ಥಗಳನ್ನು ಸೇವಿಸಬಾರದು. ಕಸ ಮತ್ತು ಇತರೆ ತ್ಯಾಜ್ಯ ವಸ್ತುಗಳನ್ನು ರಸ್ತೆ ಬದಿ, ಪಾದಚಾರಿ ರಸ್ತೆ, ಮೋರಿಯಲ್ಲಿ ಹಾಕಬಾರದು. ಹಾಕಿದಲ್ಲಿ ಕ್ರಿಮಿಕೀಟಗಳು ಆಕರ್ಷಿಸಿ ಕರಳುಬೇನೆ/ಕಾಲರಾ ಬರುವ ಸಂಭವವಿರುತ್ತವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಕೋರಿದ್ದಾರೆ.