ವಿಜಯಸಾಕ್ಷಿ ಸುದ್ದಿ, ಧಾರವಾಡ: ಕನ್ನಡ ಭಾಷೆ ಮಾತ್ರವಲ್ಲದೆ ಹಿಂದಿ ಭಾಷೆಯ ನಾಟಕವನ್ನು ರಂಗಾಯಣವು ಸಿದ್ಧಪಡಿಸುತ್ತಿರುವುದು ಹೆಮ್ಮೆಯ ಸಂಗತಿ. ಇದೇ ರೀತಿ ಇನ್ನೂ ಬೇರೆ ಭಾಷೆಯ ನಾಟಕಗಳನ್ನು ಸಿದ್ಧಪಡಿಸಿ ಪ್ರದರ್ಶನ ಮಾಡಬೇಕು ಎಂದು ರಂಗ ನಿರ್ದೇಶಕರಾದ ನರೇಂದ್ರ ಸಾಚರ ಹೇಳಿದರು.
ರಂಗಾಯಣವು ಪಂ.ಬಸವರಾಜ ರಾಜಗುರು ಬಯಲು ರಂಗಮಂದಿರದಲ್ಲಿ ರಂಗ ತಂಡಗಳ ಸಹಯೋಗದಲ್ಲಿ ನಾಟಕ ತರಬೇತಿ ಕಾರ್ಯಾಗಾರದಲ್ಲಿ ಸಿದ್ಧಗೊಂಡ ಹಾಗೂ ಸ್ಥಳೀಯ ತಂಡಗಳಿಂದ ಹಮ್ಮಿಕೊಂಡಿದ್ದ ರಂಗಾಯಣ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಧಾರವಾಡವು ವಿದ್ಯಾಕಾಶಿ ಎಂದೇ ಪ್ರಸಿದ್ಧವಾಗಿದೆ. ಆದ್ದರಿಂದ ರಂಗಾಯಣವು ಬೇರೆ ಭಾಷೆಯ ನಾಟಕಗಳಿಗೂ ಆದ್ಯತೆಯನ್ನು ನೀಡುವ ಮೂಲಕ ನೋಡುಗರಿಗೆ ವಿಭಿನ್ನ ಭಾಷೆ, ಸಂಸ್ಕೃತಿ, ಆಚಾರ-ವಿಚಾರ ಸೇರಿದಂತೆ ಹಲವಾರು ಮಾಹಿತಿಗಳ ಜೊತೆಗೆ ಮನರಂಜನೆಯನ್ನು ನೀಡಿದಂತಾಗುತ್ತದೆ ಎಂದು ಸಲಹೆ ನೀಡಿದರು.
ರಂಗಾಯಣ ನಿರ್ದೇಶಕರಾದ ಡಾ. ರಾಜು ತಾಳಿಕೋಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ರಂಗಾಯಣವು ಆಯೋಜಿಸಿದ ನಾಲ್ಕು ದಿನದ ರಂಗಾಯಣ ನಾಟಕೋತ್ಸವದ ಯಶಸ್ಸಿಗೆ ಎಲ್ಲ ರಂಗಾಸಕ್ತರು, ಸಾಹಿತಿಗಳು ಉತ್ತಮ ಸಹಕಾರವನ್ನು ನೀಡಿದ್ದಾರೆ. ಇದೇ ರೀತಿ ಕಲೆಗೆ ಪ್ರೋತ್ಸಾಹ ನೀಡುವುದರಿಂದ ರಂಗಾಯಣವು ಇನ್ನೂ ಹಲವಾರು ನಾಟಕೋತ್ಸವಗಳನ್ನು ಆಯೋಜಿಸಲು ಪ್ರೇರಣೆ ನೀಡಬೇಕು ಎಂದು ಹೇಳಿದರು.
ರಂಗ ನಿರ್ದೇಶಕಿ ಮಾಯಾ ರಾವ್, ನಾಟಕ ನಿರ್ದೇಶಕರಾದ ಪಾಂಡುರಂಗ ಮಸಾಲೆ, ರಂಗಾಯಣ ಆಡಳಿತಾಧಿಕಾರಿಗಳಾದ ಶಶಿಕಲಾ ಹುಡೇದ ಸೇರಿದಂತೆ ಇತರರು ಇದ್ದರು. ನಂತರ `ಜೋಕುಮಾರ ಸ್ವಾಮಿ’ ನಾಟಕವನ್ನು ಶೂಲೇಬಾವಿ ಮನುಜಮತ ಫೌಂಡೇಶನ್ ತಂಡದವರು ಪ್ರಸ್ತುತಪಡಿಸಿದರು.