ವಿಜಯಸಾಕ್ಷಿ ಸುದ್ದಿ, ಗದಗ : ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯಲ್ಲಿ ಬರುವ ಮತಗಟ್ಟೆಗಳು ಹಾಗೂ ಇತರ ವಿವರಗಳನ್ನು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ನೀಡಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 961 ಮತಗಟ್ಟೆಗಳಿದ್ದು, ಈ ಪೈಕಿ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ-251, ಗದಗ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ-223, ರೋಣ ವಿಧಾನಸಭಾ ವ್ಯಾಪ್ತಿಯಲ್ಲಿ-267 ಹಾಗೂ ನರಗುಂದ ವಿಧಾನಸಭಾ ಮತಕ್ಷೇತ್ರದಲ್ಲಿ-220 ಮತಗಟ್ಟೆಗಳು ಬರುತ್ತವೆ.
ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಖಾತರಿಪಡಿಸಿಕೊಳ್ಳುವುದು, ಮತಗಟ್ಟೆ ಬಗ್ಗೆ ಮಾಹಿತಿ ಪಡೆಯುವುದು ಇತರೆ ಚುನಾವಣೆ ವಿಷಯಗಳಿಗೆ ಸಂಬಂಧಿಸಿದಂತೆ ದೂರು ಸಲ್ಲಿಸಲು/ ಮಾಹಿತಿಯನ್ನು ಪಡೆಯಲು ಜಿಲ್ಲಾಧಿಕಾರಿ ಅವರ ಕಚೇರಿಯಲ್ಲಿ ಟೋಲ್ ಫ್ರೀ ಸಂಖ್ಯೆ-1950ಕ್ಕೆ ಕರೆ ಮಾಡಬಹುದಾಗಿದೆ.
ಜಿಲ್ಲೆಯಲ್ಲಿ ಯಾವುದೇ ರೀತಿ ದೂರುಗಳ ನಿರ್ವಹಣೆಗಾಗಿ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಸೈಯದ್ ಜೋಹೈಬುಲ್ಲಾ(ಮೊ.ನಂ-8277944217) ಇವರನ್ನು ನೋಡಲ್ ಅಧಿಕಾರಿಗಳೆಂದು ನೇಮಕ ಮಾಡಲಾಗಿದೆ. ಇವರ ಅಧೀನದಲ್ಲಿ Complaint Monitoring Team, cVIGIL ತಂಡ, 1950 ಕಾಲ್ ಸೆಂಟರ್ ಹಾಗೂ ಜಿಲ್ಲಾ ಕಂಟ್ರೋಲ್ ರೂಂ ಕಾರ್ಯನಿರ್ವಹಿಸುತ್ತವೆ.
ಚುನಾವಣಾ ಆಯೋಗದ ಸೂಚನೆಯಂತೆ ಪ್ರತಿ ಮತಗಟ್ಟೆಗಳಿಗೆ ಒಬ್ಬರು ಅಧ್ಯಕ್ಷಾಧಿಕಾರಿ ಮತ್ತು ಮೂವರು ಮತಗಟ್ಟೆ ಅಧಿಕಾರಿಗಳು ಹಾಗೂ ಮೀಸಲು ಸಿಬ್ಬಂದಿಗಳನ್ನು ನೇಮಕ ಮಾಡಲಾಗುತ್ತದೆ. ಸದರಿ ಅಧಿಕಾರಿಗಳಿಗೆ ಈಗಾಗಲೇ ಮೊದಲನೇ ಹಂತದ ತರಬೇತಿಯನ್ನು ನೀಡಲಾಗಿದೆ. ಕೇಂದ್ರ ಸರ್ಕಾರಿ ಅಧಿಕಾರಿ/ಸಿಬ್ಬಂದಿಗಳನ್ನು ಆಯ್ದ ಮತಗಟ್ಟೆಗಳಿಗೆ ಮೈಕ್ರೋ ವೀಕ್ಷಕರನ್ನಾಗಿ ನೇಮಕ ಮಾಡಲಾಗುತ್ತದೆ.
2024ರ ಲೋಕಸಭಾ ಸಾರ್ವತ್ರಿಕ ಚುನಾವಣೆಯನ್ನು ಮುಕ್ತ, ನ್ಯಾಯಸಮ್ಮತ ಹಾಗೂ ಪ್ರತಿಯೊಬ್ಬ ಮತದಾರರು ಸಹ ಅವರ ಹಕ್ಕನ್ನು ಚಲಾಯಿಸಲು ಅಡೆ-ತಡೆಗಳಾಗದಂತೆ ಎಲ್ಲರೂ ಸಹ ಮತದಾನದಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಜಿಲ್ಲಾಡಳಿತದಿಂದ ಎಲ್ಲಾ ಕ್ರಮ ಕೈಗೊಳ್ಳಲಾಗಿದೆ. ಭಾರತ ಚುನಾವಣಾ ಆಯೋಗದ ಎಲ್ಲಾ ನಿಯಮಗಳಂತೆ ಕಟ್ಟುನಿಟ್ಟಾಗಿ ಪಾಲಿಸಿ ಚುನಾವಣೆಯನ್ನು ನಡೆಸಲು ಜಿಲ್ಲೆಯ ಎಲ್ಲಾ ಮತದಾರರು, ಸಾರ್ವಜನಿಕರು ಹಾಗೂ ರಾಜಕೀಯ ಪಕ್ಷಗಳ ಸಹಕಾರ ಕೋರಿದೆ.
ಚುನಾವಣೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಭಾರತ ಚುನಾವಣಾ ಆಯೋಗದ ವೆಬ್‌ಸೈಟ್ www.eci.nic.in ಮತ್ತು ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ವೆಬ್‌ಸೈಟ್ www.ceokarnataka.kar.nic.in ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯ ವೆಬ್‌ಸೈಟ್ www.gadag.nic.in ನಲ್ಲಿ ಮಾಹಿತಿ ಪಡೆಯಬಹುದು ಎಂದು ಜಿಲ್ಲಾಧಿಕಾರಿ ವೈಶಾಲಿ.ಎಂ.ಎಲ್ ಅವರು ತಿಳಿಸಿದ್ದಾರೆ.
ಈವರೆಗೆ ಜಿಲ್ಲೆಯಲ್ಲಿ ರೂ.20,47,700 ನಗದನ್ನು ವಶಪಡಿಸಿಕೊಳ್ಳಲಾಗಿದೆ. 20,47,700 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದ್ದು, ಸದರಿ ಮದ್ಯದ ಮೌಲ್ಯ ರೂ. 20,37,547.33 ಆಗುತ್ತದೆ. ರೂ. 21,404 ಮೌಲ್ಯದ 0.506 ಕೆ.ಜಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ರೂ. 1,60,000 ಬೆಲೆಬಾಳುವ 2 ಕೆ.ಜಿ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದ್ದು, ವಶಪಡಿಸಿಕೊಳ್ಳಲಾದ ಇತರೆ ಸಾಮಗ್ರಿಗಳ ಮೌಲ್ಯ ರೂ. 42,350 ಆಗುತ್ತದೆ. ಒಟ್ಟಾರೆಯಾಗಿ ಎಲ್ಲಾ Seizures ಒಟ್ಟು ಮೊತ್ತ ರೂ 43,09,001.33 ಆಗುತ್ತದೆ.