ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಶ್ರಾವಣ ಮಾಸದ 2ನೇ ಶುಕ್ರವಾರ ಶೃದ್ಧಾ ಭಕ್ತಿಯಿಂದ ನೆರವೇರಿಸುವ ವರಮಹಾಲಕ್ಷ್ಮೀ ಪೂಜೆಯ ಪೂರ್ವ ಸಿದ್ಧತೆಗಾಗಿ ಗುರುವಾರ ಪಟ್ಟಣದ ಮಾರುಕಟ್ಟೆಯಲ್ಲಿ ಹೆಂಗಳೆಯರು ಲಕ್ಷ್ಮೀ ಮೂರ್ತಿ, ಹೂವು, ಹಣ್ಣು, ಪೂಜಾ ಸಾಮಗ್ರಿ ಮತ್ತು ಅಲಂಕಾರಿಕ ವಸ್ತುಗಳ ಖರೀದಿ ನಡೆಸಿದರು.
ಹಣ್ಣುಗಳ ವ್ಯಾಪಾರಸ್ಥರು ಬಾಳೆ, ಸೇಬು, ಕಿತ್ತಳೆ, ಚಿಕ್ಕೂ, ಮೋಸಂಬಿ ಸೇರಿ 5 ತರಹದ ಹಣ್ಣುಗಳ ಸೆಟ್ ಮಾಡಿ 150ರಿಂದ 200 ರೂದಂತೆ ಮಾರಾಟ ಮಾಡಿದರು. 50ರೂಗೆ 2 ಬಾಳೆ ಕಂಬ ಮಾರಾಟ ಮಾಡಿದರು. ದಿನಸಿ, ಅಲಂಕಾರಿಕ ವಸ್ತುಗಳು, ವಿಳ್ಯದೆಲೆ, ಹೂವು, ಬಾಳೆ, ಕಬ್ಬುಗಳ ಬೆಲೆಯಲ್ಲೂ ಹೆಚ್ಚಳ ಕಂಡುಬಂದಿತು.
ಮುಖ್ಯ ಮಾರುಕಟ್ಟೆ ಮುಂದುವರೆದ ಭಾಗದಲ್ಲಿ ದುರಸ್ತಿ ಕಾರ್ಯ ನಡೆದಿರುವುದು ಮತ್ತು ಹಬ್ಬದ ಖರೀದಿಯಿಂದ ಇಡೀ ದಿನ ಮಾರ್ಕೆಟ್ ರಸ್ತೆ ಜನರಿಂದ ತುಂಬಿತ್ತು. ಉತ್ತಮ ಮಳೆ-ಬೆಳೆಯಿಂದ ಸಂತಸದಲ್ಲಿದಲ್ಲಿರುವ ರೈತ ಸಮುದಾಯ ಹಬ್ಬದ ಸಂಭ್ರಮಕ್ಕೆ ಅಣಿಯಾಗಿದ್ದಾರೆ.