ಕಪ್ಪತ್ತಗುಡ್ಡದ ಹಸಿರೀಕರಣಕ್ಕೆ ಸಿದ್ಧತೆ

0
Spread the love

ವಿಜಯಸಾಕ್ಷಿ ಸುದ್ದಿ, ಡಂಬಳ: ಮುಂಡರಗಿ ತಾಲೂಕಿನ ಡಂಬಳ ವ್ಯಾಪ್ತಿಯ ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಪ್ರಸಿದ್ಧವಾದ ಶುದ್ಧ ಗಾಳಿಗೆ ಹೆಸರಾದ ತಾಣ ಕಪ್ಪತ್ತಗುಡವನ್ನು ಇನ್ನಷ್ಟು ಹಸಿರುಗೊಳಿಸುವದರೊಂದಿಗೆ ರೈತರ ಜಮೀನುಗಳಲ್ಲಿ ಬೆಳೆಸಲು ಬೇಕಾಗುವ 1.50 ಲಕ್ಷಕ್ಕೂ ಅಧಿಕ ಸಸಿಗಳನ್ನು ಬಾಗೇವಾಡಿ ನರ್ಸರಿಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳು ಬೆಳೆಸಿ ಕಪ್ಪತ್ತಗುಡ್ಡದ ಹಸಿರು ಹೆಚ್ಚಿಸಲು ಸಿದ್ಧರಾಗಿದ್ದಾರೆ.

Advertisement

ಇದೀಗ ಬೆಳೆಸಿರುವ 1.50 ಲಕ್ಷ ಸಸಿಗಳಲ್ಲಿ 1 ಲಕ್ಷ 20 ಸಾವಿರ ಅಧಿಕ ಸಸಿಗಳನ್ನು ಕಪ್ಪತ್ತಗುಡ್ಡ ಭಾಗದಲ್ಲಿಯೇ ನೆಡುವುದು ಹಾಗೂ ಇನ್ನುಳಿದ 30 ಸಾವಿರ ಸಸಿಗಳನ್ನು ರೈತರಿಗೆ ವಿತರಿಸುವ ಮೂಲಕ ರೈತರ ಜಮೀನುಗಳಲ್ಲಿಯೂ ಹಸಿರೀಕರಣ ಮಾಡುವುದು ಅರಣ್ಯ ಇಲಾಖೆಯ ಉದ್ದೇಶವಾಗಿದೆ. ಇದಕ್ಕೆ ಕಪ್ಪತ್ತಗುಡ್ಡ ವಲಯ ಅರಣ್ಯ ಅಧಿಕಾರಿ ಮಂಜುನಾಥ ಮೇಗಲಮನಿ ಮತ್ತು ಹಲವಾರು ಅಧಿಕಾರಿಗಳು, ಸಿಬ್ಬಂದಿಗಳ ನಿರಂತರ ಶ್ರಮವಿದೆ.

ಅರಣ್ಯ ಇಲಾಖೆಯಿಂದ ಸಿದ್ಧವಾಗಿರುವ ಈ ಸಸಿಗಳನ್ನು ಬೆಳೆಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಹಲವಾರು ತಿಂಗಳುಗಳ ಶ್ರಮವಿದೆ. ಗೊಬ್ಬರ, ಮರಳು ಮತ್ತು ಕೆಂಪು ಮಣ್ಣನ್ನು ಎಚ್ಚರಿಕೆಯಿಂದ ಸಂಯೋಜನೆ ಮಾಡಿ ಫಲವತ್ತಾದ ಮಣ್ಣನ್ನು ತಯಾರಿಸಿ, ನಂತರ ಬೀಜಗಳನ್ನು ಸಾಮಾನ್ಯವಾಗಿ ಜನವರಿ ಮತ್ತು ಮಾರ್ಚ್ ನಡುವೆ ಚೀಲಗಳಲ್ಲಿ ಹಾಕಿ, ಅವುಗಳು ಮೊಳಕೆಯೊಡೆದು ಬೆಳೆದ ನಂತರ ಜೂನ್ ತಿಂಗಳಲ್ಲಿ ಅವುಗಳನ್ನು ದೊಡ್ಡ ಚೀಲಗಳಿಗೆ ಸ್ಥಳಾಂತರಿಸಲಾಗುತ್ತದೆ. ಹೀಗೆ ನಿರಂತರವಾಗಿ ಒಂದು ವರ್ಷದ ಶ್ರಮದ ಪ್ರತಿಫಲವಾಗಿ ಸಸಿಗಳು ನಾಟಿ ಮಾಡಲು ಸಿದ್ಧವಾಗುತ್ತವೆ.

ಆರ್‌ಎಸ್‌ಪಿ ಅಡಿ ರೈತರ ವಿತರಣೆಗಾಗಿ ಸಿದ್ಧವಾಗಿರುವ 30 ಸಾವಿರ ಸಸಿಗಳಲ್ಲಿ ಅತ್ಯಂತ ಬೆಲೆಬಾಳುವ, ರೈತರಿಗೆ ಮುಂದೆ ವರದಾನವಾಗುವ ಸಾಗವಾನಿ, ಮಹಾಗನಿ, ಸೀತಾಫಲ, ನುಗ್ಗೆ, ಲಿಂಬೆ, ಬಿದಿರು, ನೇರಳೆ, ನೆಲ್ಲಿ, ಮಾವಿನ ಸಸಿಗಳಿದ್ದು, ರೈತರಿಗೆ ಅತ್ಯಂತ ಕಡಿಮೆ ಬೆಲೆಗೆ ಸಿಗಲಿವೆ.

ವರ್ಷದಿಂದ ವರ್ಷಕ್ಕೆ ಭೂಮಿಯ ತಾಪಮಾನ ಹೆಚ್ಚಾಗುತ್ತಿದೆ. ಮಳೆ ಕಡಿಮೆಯಾಗುತ್ತಿದೆ. ಇದರ ತಡೆಗೆ ಪ್ರತಿಯೊಬ್ಬರೂ ಗಿಡಗಳನ್ನು ಹೇರಳವಾಗಿ ಬೆಳೆಸಬೇಕು. ಇದರಿಂದ ಸಹಜವಾಗಿಯೇ ಆಮ್ಲಜನಕದ ಪ್ರಮಾಣವೂ ಹೆಚ್ಚಾಗುತ್ತದೆ. ವಾಯುಮಾಲಿನ್ಯ ಕಡಿಮೆಯಾಗಿ, ಮಳೆ ಪ್ರಮಾಣ ಹೆಚ್ಚಾಗಿ, ಬರಗಾಲದಂತಹ ಸ್ಥಿತಿ ದೂರವಾಗುತ್ತದೆ. ಈ ಬಗ್ಗೆ ಪ್ರತಿಯೊಬ್ಬರೂ ಗಮನ ಹರಿಸಬೇಕು. ಸಸಿಗಳನ್ನು ಪಡೆದುಕೊಳ್ಳಲು ಇಚ್ಛಿಸುವವರು ಅರಣ್ಯ ಇಲಾಖೆಯ ಶಂಕರ ಕೋನಪ್ಪನವರ-9886583017, ಕೃಷ್ಣಾ ಫಮ್ಮರ-7483136732 ಇವರನ್ನು ಸಂಪರ್ಕಿಸಬಹುದಾಗಿದೆ.

“ನಮ್ಮ ಬಾಗೇವಾಡಿ ನರ್ಸರಿಯಲ್ಲಿ ಹಿರಿಯ ಅರಣ್ಯ ಅಧಿಕಾರಿಗಳ ಸೂಚನೆಯ ಮೇರೆಗೆ 1.50 ಲಕ್ಷ ಸಸಿಗಳನ್ನು ಬೆಳೆಸಿದ್ದು, ಕಪ್ಪತ್ತಗುಡ್ಡದಲ್ಲಿ ನೆಡಲಾಗುವುದ. ರೈತರು ತಮ್ಮ ಜಮೀನುಗಳಲ್ಲಿ, ತೋಟಗಳ ಬದುವಿನಲ್ಲಿಯೂ ಗಿಡಗಳನ್ನು ಬೆಳೆಸಲು ಮುಂದಾಗಬೇಕು”

– ಮಂಜುನಾಥ ಮೇಗಲಮನಿ.

ಕಪ್ಪತ್ತಗುಡ್ಡ ವಲಯ ಅರಣ್ಯಾಧಿಕಾರಿ.

“ವನೌಷಧಿಗಳ ಆಗರ, ಸಸ್ಯ ಕಾಶಿ ಕಪ್ಪತ್ತಗುಡ್ಡ ಈ ಭಾಗದ ಹಸಿರಿನಿಂದ ಕೂಡಿದ, ಸ್ವಚ್ಛ ಆಮ್ಲಜನಕ ನೀಡುವ ತಾಣವಾಗಿದೆ. ಕಪ್ಪತ್ತಗುಡ್ಡಕ್ಕೆ ಅರಣ್ಯ ಇಲಾಖೆಯಿಂದ 1.50 ಲಕ್ಷ ಸಸಿಗಳನ್ನು ಬೆಳೆಸಿ ಕಪ್ಪತ್ತಗುಡ್ಡದಲ್ಲಿ ನೆಡಲಾಗುತ್ತಿದೆಯಲ್ಲದೆ, ರೈತರಿಗೂ ವಿತರಿಸಲಾಗುತ್ತಿದೆ. ಇದರ ಸದುಪಯೋಗ ಪಡೆದುಕೊಂಡು, ಅರಣ್ಯ ಇಲಾಖೆಯೊಂದಿಗೆ ಪ್ರತಿಯೊಬ್ಬರೂ ಕೈಜೋಡಿಸಿ ಪರಿಸರ ಉಳಿಸಿ ಬೆಳೆಸಲು ಮುಂದಾಗಿ”

– ಜಿ.ಎಸ್. ಪಾಟೀಲ.

ರೋಣ ಮತಕ್ಷೇತ್ರದ ಶಾಸಕರು.


Spread the love

LEAVE A REPLY

Please enter your comment!
Please enter your name here