
ವಿಜಯಸಾಕ್ಷಿ ಸುದ್ದಿ, ಗದಗ: 28ಕ್ಕಿಂತ ಕಡಿಮೆ ಅಂಕ ಪಡೆಯುವ ಮಕ್ಕಳನ್ನು ನಾವು ವೈಯಕ್ತಿಕವಾಗಿ ಕಾಳಜಿ ಮಾಡಿ ಪರೀಕ್ಷೆಗೆ ಸಿದ್ಧಗೊಳಿಸಬೇಕು. ಈ ಮಕ್ಕಳಿಗೆ ಜಿಲ್ಲಾ ಪಂಚಾಯತ ವತಿಯಿಂದ ಪಾಸಿಂಗ್ ಪ್ಯಾಕೇಜ್ ನೀಡುತ್ತಿದ್ದು, ಅದರ ಸದುಪಯೋಗವನ್ನು ಶಿಕ್ಷಕರು ಮತ್ತು ಮಕ್ಕಳು ಪಡೆಯಬೇಕು. ಅಲ್ಲದೆ ಉಳಿದಿರುವ 30ರಿಂದ 40 ದಿನಗಳನ್ನು ವಿದ್ಯಾರ್ಥಿಗಳಿಗೆ ಪುನರ್ ಮನನ ಮಾಡಲು ಉಪಯೋಗಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ಮುಖ್ಯೋಪಾಧ್ಯಾಯರು ಕ್ರಮ ವಹಿಸಬೇಕು ಎಂದು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್ ಸೂಚಿಸಿದರು.
ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆ ನಿಮಿತ್ತ ಹಮ್ಮಿಕೊಂಡಿದ್ದ ಗದಗ ಜಿಲ್ಲೆಯ ಸರ್ಕಾರಿ, ಅನುದಾನಿತ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರ ಹಾಗೂ ವಸತಿ ಶಾಲೆಗಳ ಮುಖ್ಯಸ್ಥರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಲಾಖೆಯ ಉಪ ನಿರ್ದೇಶಕ (ಆಡಳಿತ) ಆರ್.ಎಸ್. ಬುರಡಿ ಮಾತನಾಡುತ್ತಾ, ಯಾವ ಶಾಲೆಗಳಲ್ಲಿ ಓದುವ ಕೋಣೆ ಮಾಡಲು ಸಾಧ್ಯವೋ ಅಲ್ಲಿ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಅನುಕೂಲ ಮಾಡಿಕೊಡಬೇಕು. ಬೆಳಗಿನ ಅವಧಿಯಲ್ಲಿ ವಿದ್ಯಾರ್ಥಿಗಳ ಮನಸ್ಸು ಓದಿನ ಕಡೆ ಬೇಗನೆ ಏಕಾಗ್ರತೆಗೊಳ್ಳುವುದರಿಂದ ಎಂಟು ಗಂಟೆಗೆ ಶಾಲೆಯಲ್ಲಿ ಓದುವ ವ್ಯವಸ್ಥೆಯನ್ನು ಮಾಡಿಕೊಡಬೇಕು ಎಂದರು.
ಸಾಯಂಕಾಲ ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ಆಧಾರಿತ ‘ಫನ್ ವಿಥ್ ಲರ್ನ್’, ಡಿಎಸ್‌ಇಆರ್‌ಟಿ ವತಿಯಿಂದ ನಡೆದ ಸಂವೇಗ ತರಬೇತಿಗಳನ್ನು ಆಯೋಜಿಸುವ ಮೂಲಕ ಕಲಿಕೆಗೆ ಅವಕಾಶ ಮಾಡಿಕೊಡಬೇಕು. ಈಗಾಗಲೇ ಕಚೇರಿಯಿಂದ ಸರಳ ಹಾಗೂ ಬಹುಮುಖ್ಯ ಸಾಮರ್ಥ್ಯ ಆಧಾರಿತ ನಮೂನೆಗಳನ್ನು ನೀಡಿದ್ದು, ವಿದ್ಯಾರ್ಥಿಗಳು ಯಾವ ಅಂಶಗಳಲ್ಲಿ ಕಲಿಕೆ ಸಾಧಿಸಿದ್ದಾರೆ ಹಾಗೂ ಸಾಧಿಸಿರುವುದಿಲ್ಲ ಎಂಬ ಪಟ್ಟಿಯ ಆಧಾರದ ಮೇಲೆ ಮಕ್ಕಳಿಗೆ ಮಾರ್ಗದರ್ಶನ ಮಾಡಬೇಕು. ಮುಂದಿನ ವಾರದಲ್ಲಿ ಸ್ಕೋರರ್ ವಿದ್ಯಾರ್ಥಿಗಳಿಗಾಗಿ ವಿಶೇಷ ಕಾರ್ಯಾಗಾರ, ಮನೆ ಭೇಟಿ ಕಾರ್ಯಕ್ರಮ, ಓದಿನ ಮನೆ, ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗಾಗಿ ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಗೂಗಲ್ ಮೀಟ್ ಸಹಾಯದಿಂದ ಚರ್ಚೆ ಸಂವಾದ ನಡೆಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಡಯಟ್ ಪ್ರಾಂಶುಪಾಲ ಜಿ.ಎಲ್. ಬಾರಾಟಕ್ಕೆ, ಡಿವೈಪಿಸಿ ಎಂ.ಹೆಚ್. ಕಂಬಳಿ, ಜಿಲ್ಲಾ ಎಸ್‌ಎಸ್‌ಎಲ್‌ಸಿ ನೋಡಲ್ ಅಧಿಕಾರಿಗಳಾದ ಎಚ್.ಬಿ. ರಡ್ಡೇರ, ಪಿ.ಎಂ ಪೋಷಣ ಅಭಿಯಾನದ ಸಹಾಯಕ ನಿರ್ದೇಶಕರಾದ ಶಂಕರ್ ಹಡಗಲಿ, ಶಾಲಾ ದತ್ತು ಅಧಿಕಾರಿಗಳು, ವಿಷಯ ಪರಿವೀಕ್ಷಕರು, ಎಪಿಸಿಓ, ಎಲ್ಲ ತಾಲೂಕಿನ ಎಸ್‌ಎಸ್‌ಎಲ್‌ಸಿ ನೋಡಲ್ ಅಧಿಕಾರಿಗಳು,ಜಿಲ್ಲೆಯ ಎಲ್ಲಾ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಹಾಜರಿದ್ದರು.
ಪರೀಕ್ಷೆ ದಿನದವರೆಗೂ ಮಕ್ಕಳು ಶಾಲೆಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ರಾಜ್ಯಮಟ್ಟದ ಪೂರ್ವಸಿದ್ಧತಾ ಪರೀಕ್ಷೆಯು ವಾರ್ಷಿಕ ಪರೀಕ್ಷೆಯ ಮಾದರಿಯಲ್ಲಿ ಆಯಾ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲು ಚಿಂತನೆ ನಡೆಸಿದೆ. ಜೊತೆಗೆ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಪಕ್ಕದ ಪ್ರೌಢಶಾಲೆಗಳ ಶಿಕ್ಷಕರಿಂದ ಮಾಡಿಸಲಾಗುವುದು. ಪಾಲಕ ಪೋಷಕರ, ತಾಯಂದಿರ ಸಭೆಯನ್ನು ಆಯೋಜಿಸಿ ಮಗುವಿನ ಅಭ್ಯಾಸಕ್ಕಾಗಿ ಕಾಳಜಿ ವಹಿಸುವಂತೆ ಕ್ರಮವಹಿಸಬೇಕು. ಜೊತೆಗೆ ಪರೀಕ್ಷಾ ಪದ್ಧತಿ, ಅಧ್ಯಯನ ಕ್ರಮದ ಜಾಗೃತಿ ಮೂಡಿಸಲು ತಂದೆ-ತಾಯಿಯ ಫೋನ್ ಸಂಖ್ಯೆಗಳಿಗೆ ಜಿ.ಪಂ ವತಿಯಿಂದ ಕರೆ ಮಾಡಿ ಜಾಗೃತಿ ಮೂಡಿಸಲಾಗುವುದು ಎಂದು ಜಿ.ಪಂ ಸಿಇಓ ಭರತ್ ಎಸ್ ತಿಳಿಸಿದರು.