ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯ ಜನರ ಬೇಡಿಕೆಗನುಸಾರವಾಗಿ ಯೋಜನೆಗಳನ್ನು ತಯಾರಿಸಬೇಕು. ಈ ಯೋಜನೆಗಳು ಗ್ರಾಮ ಮಟ್ಟದಿಂದ ರಾಜ್ಯದ ಯೋಜನೆಗಳಿಗೆ ಸೇರಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಯೋಜನಾ ಸಮಿತಿಯು ಅತ್ಯಂತ ಮಹತ್ವದ ಸಮಿತಿಯಾಗಿದೆ ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ, ಪ್ರವಾಸೋದ್ಯಮ ಸಚಿವರು, ಜಿಲ್ಲಾ ಯೋಜನಾ ಸಮಿತಿಯ ಅಧ್ಯಕ್ಷರೂ ಆಗಿರುವ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ತಿಳಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಜಿಲ್ಲಾ ಯೋಜನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಸಚಿವರು ಮಾತನಾಡಿದರು.
ಜಿಲ್ಲಾ ಯೋಜನಾ ಸಮಿತಿ ಸದಸ್ಯರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಸಚಿವರು, ಜಿಲ್ಲೆಯ ಗ್ರಾಮಗಳಲ್ಲಿನ ವರದಿಗಳನ್ನು ಆಧರಿಸಿದ ಯೋಜನೆಗಳು ಮೇಲ್ಮಟ್ಟದವರೆಗೆ ಸಿದ್ಧಪಡಿಸಿದ ಯೋಜನೆಗಳ ವರದಿಯು ರಾಜ್ಯಕ್ಕೆ ಮುನ್ನುಡಿಯಾಗಬೇಕು. ಗ್ರಾಮ ಸಭೆಗಳಲ್ಲಿ, ವಾರ್ಡ್ ಸಭೆಗಳಲ್ಲಿ ಚರ್ಚಿಸಿರುವ ವಿಷಯಗಳನ್ನು ಸಮಿತಿಯ ಗಮನಕ್ಕೆ ತರಬೇಕು. ಕೆಳಮಟ್ಟದಿಂದ ಯೋಜನೆಗಳ ತಯಾರಿಕೆ, ಕಾಮಗಾರಿಗಳ ಅನುಷ್ಠಾನಕ್ಕೆ ಕ್ರಮ ವಹಿಸಬೇಕು. ಕೆಳಮಟ್ಟದಿಂದ ಮೇಲ್ಮಟ್ಟದವರೆಗೆ ಯೋಜನೆ ಸಿದ್ಧಪಡಿಸಲು ಪ್ರಯೋಗ ಪ್ರಾರಂಭಿಸಿದ್ದು ಗದಗ ಜಿಲ್ಲೆಯಾಗಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಜಿ.ಪಂ ಮುಖ್ಯ ಯೋಜನಾಧಿಕಾರಿ ಎ.ಎ. ಕಂಬಾಳಿಮಠ ಮಾನವ ಅಭಿವೃದ್ಧಿ ಸೂಚ್ಯಂಕ ಮತ್ತು ಸಮಗ್ರ ಅಭಿವೃದ್ಧಿ ಸೂಚ್ಯಂಕಗಳ ವಿವರಗಳನ್ನು ಮಂಡಿಸಿದರು. ಕೆಲವು ಪರಿಷ್ಕರಣೆಯೊಂದಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸರ್ವಾನುಮತದಿಂದ ಸಭೆಯಲ್ಲಿ ತೀರ್ಮಾನಿಸಲಾಯಿತು. ಸರ್ಕಾರಕ್ಕೆ ಕರಡು ಪ್ರಸ್ತಾವನೆಯನ್ನು ನವೆಂಬರ್ 15ರೊಳಗೆ ಸಲ್ಲಿಸಲು ಸೂಚನೆಯಿದ್ದು, ನವೆಂಬರ್ 14ರಂದು ಇನ್ನೊಂದು ಸಭೆಯನ್ನು ಕರೆಯಲು ಸಭೆಯಲ್ಲಿ ನಿರ್ಧರಿಸಲಾಯಿತು.
ಸಭೆಯಲ್ಲಿ ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ, ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಜಿಲ್ಲಾ ಯೋಜನಾ ಸಮಿತಿ ಸದಸ್ಯರಾದ ವಿಜಯಕುಮಾರ ಶಿವಪ್ಪ ನೀಲಗುಂದ, ಬೆಟಗೇರಿ ರಾಜೇಸಾಬ ಮೌಲಾಸಾಬ, ಪರವೀನಬಾನೂ ಅಬ್ದುಲಮುನಾಫ್ ಮುಲ್ಲಾ, ರಾಜೇಶ್ವರಿ ಶಂಕರಗೌಡ ವೀರನಗೌಡ್ರ, ಮಲ್ಲಯ್ಯ ಗುರುಬಸಪ್ಪನಮಠ, ರಾಚಯ್ಯ ಬಸಯ್ಯ ಮಾಲಗಿತ್ತಿಮಠ, ಚಂದ್ರಶೇಖರಗೌಡ ಪರ್ವತಗೌಡ ಕರಿಸೋಮನಗೌಡ, ಕೃಷ್ಣಾ ಪರಾಪೂರ, ದಾಬಲಸಾಬ ಬಾಡಿನ, ಬರಕತ್ ಅಲಿ ಮುಲ್ಲಾ, ಜೈನುಲಾಬ್ದೀನ್ ರಹಮಾನಸಾಬ ನಮಾಜಿ, ಮಾನ್ವಿ ವಿನಾಯಕ ಶಿವಪ್ಪ, ರಾಜೇಸಾಬ ಅಮೀನಸಾಬ ಸಾಂಗ್ಲಿಕರ್, ವೆಂಕಟೇಶ ಕರಿಯಪ್ಪ ಮುದುಗಲ್ಲ, ಮಾಧೂಸಾ ತೇಜೋಸಾ ಮೇರವಾಡೆ, ಸುರೇಶ ಕಟ್ಟಿಮನಿ, ತಾಲೂಕು ಯೋಜನಾ ಸಮಿತಿ ಸದಸ್ಯರಾದ ವಿಜಯಲಕ್ಷ್ಮಿ ಯಲ್ಲಪ್ಪ ಹೊಸಮನಿ, ರಾಜಶೇಖರ ಮಾಲಗಿತ್ತಿ, ಪ್ರೇಮವ್ವ ಮಾನಪ್ಪ ಲಮಾಣಿ, ಶಿವಲೀಲಾ ದೇವಪ್ಪ ಬಂಡಿಹಾಳ, ಶೋಭಾ ಮುಳ್ಳೂರ, ಬಸಮ್ಮ ಸ್ಥಾವರಮಠ, ವಿಜಯಲಕ್ಷ್ಮಿ ಧರ್ಮಣ್ಣ ಲಮಾಣಿ, ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ತಾ.ಪಂ ಕಾರ್ಯನಿರ್ವಹಣಾಧಿಕಾರಿಗಳು ಹಾಜರಿದ್ದರು.
ಯೋಜನೆ, ಕಾರ್ಯಕ್ರಮ, ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಕಾರ್ಯದರ್ಶಿ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಮಣದೀಪ್ ಚೌಧರಿ ಮಾತನಾಡಿ, ಗ್ರಾ.ಪಂ, ತಾ.ಪಂ ಕ್ರಿಯಾ ಯೋಜನೆಯಲ್ಲಿ ಎಸ್‌ಸಿಪಿ/ಟಿಎಸ್‌ಪಿ ಯೋಜನೆ, ಕಾಮಗಾರಿಗಳ ಸಂಖ್ಯೆ ಹಾಗೂ ಬೇಕಾಗುವ ಅನುದಾನದ ವಿವರಗಳನ್ನು ಪ್ರತ್ಯೇಕವಾಗಿ ನಮೂದಿಸಬೇಕು ಎಂದು ಸಲಹೆ ನೀಡಿದರು.
“ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಎಷ್ಟು ಶಾಲಾ ಶೌಚಾಲಯಗಳು ಬೇಕಾಗುತ್ತವೆ ಎಂಬ ವರದಿ ಸಿದ್ಧಪಡಿಸಬೇಕು. ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸು ನನಸಾಗಬೇಕು. ಜಿಲ್ಲಾ ಯೋಜನಾ ಸಮಿತಿಯ ಪಟ್ಟಿ ರಾಜ್ಯಕ್ಕೆ ಮಾದರಿಯಾಗಬೇಕು”
ಎಚ್.ಕೆ. ಪಾಟೀಲ,
ಜಿಲ್ಲಾ ಉಸ್ತುವಾರಿ ಸಚಿವರು.


